ಬಂಡನಾದೆನು
(ರಾಗ ಮುಖಾರಿ. ಝಂಪೆ ತಾಳ)
ಬಂಡನಾದೆನು ನಾನು ಸಂಸಾರದಿ
ಕಂಡು ಕಾಣದ ಹಾಗೆ ಇರಬಹುದೆ ಹರಿಯೆ
ಕಂಡ ಕಲ್ಲುಗಳಿಗೆ ಕೈಮುಗಿದು ಸಾಕಾದೆ
ದಿಂಡೆಗಾರರ ಮನೆಗೆ ಬಲು ತಿರುಗಿದೆ
ಶುಂಡಾಲನಂತೆನ್ನ ಮತಿ ಮಂದವಾಯಿತೈ
ಪುಂಡರೀಕಾಕ್ಷ ನೀ ಕರುಣಿಸೈ ಬೇಗ
ನಾನಾ ವ್ರತಂಗಳನು ನಾ ಮಾಡಿ ಬಳಲಿದೆನು
ಏನಾದರು ಫಲವ ಕಾಣದಾದೆ
ಆ ನಾಡು ಈ ನಾಡು ಸುತ್ತಿ ನಾ ಕಂಗೆಟ್ಟೆ
ಇನ್ನಾದರು ಕೃಪೆಯ ಮಾಡಯ್ಯ ಹರಿಯೆ
ಬುದ್ಧಿಹೀನರ ಮಾತು ಕೇಳಿ ನಾ ಮೋಸ ಹೋದೆ
ಶುದ್ಧಿಯಿಲ್ಲದೆ ಮನವು ಕೆಟ್ಟು ಹೋಯ್ತು
ಮಧ್ವನುತ ಶ್ರೀ ಪುರಂದರ ವಿಠಲನೆ ತತ್ವದ್
ಸಿದ್ಧಿಯನು ದಯೆಗೈದು ಉಳುಹು ನೀ ತಂದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments