ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ

ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ

( ರಾಗ ಕಾಂಭೋಜ ಝಂಪೆತಾಳ) ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ ಊರ್ವಿಯೊಳು ಜನಿಸಿದೆನೊ ಕೃಷ್ಣ ಕಾರುಣ್ಯನಿಧಿಯೆನ್ನ ಕಾಯಬೇಕಯ್ಯ ಹರಿ ವಾರಿಜನಾಭ ಶ್ರೀಕೃಷ್ಣ || ಪ|| ಹುಟ್ಟಿದಂದಿಂದಿಗೂ ಸುಖವೆಂಬುದನು ಅರಿಯೆ ಕಷ್ಟವಾಗಿರುತಿಹುದು ಕೃಷ್ಣ ದಟ್ಟದಾರಿದ್ರ್ಯವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ || ಕಾಸಿನಾ ಆಸೆಯನು ಮಾಡಿ ಬಹು ದಿನದಿಂದಾ- ಯಾಸದೊಳಗಿರುತಿಹೆನೊ ಕೃಷ್ಣ ಆಸೆಯನು ಬಿಡಿಸಿ ಮಿಗೆ ದೋಷವನು ಪರಿಹರಿಸೊ ಸಾಸಿರನಾಮ ಶ್ರೀಕೃಷ್ಣ || ಮುಟ್ಟಲಂಜುವರು ಬಂಧುಗಳು ಕಂಡರೆ ಎನ್ನ ಅಟ್ಟಿ ಕೊಲುತಿಹರಯ್ಯ ಕೃಷ್ಣ ತೊಟ್ಟಿಲ ಶಿಶು ಬಾಯ ಬಿಡುವ ತೆರನಂತೆ ಕಂ- ಗೆಟ್ಟು ಶೋಕಿಸುವೆನೊ ಕೃಷ್ಣ || ಈ ಪರಿಯಿಂದ ನಾನಾಪತ್ತು ಪೇಳಿದರ- ನಾಥನ್ನ ಕಾಯದಿದೇಕೊ ಕೃಷ್ಣ ಶಾಪಿಸುವೆನೆಂದರೆ ಸಾವು ಹುಟ್ಟು ನಿನಗಿಲ್ಲ ಏಸು ದೊರೆತನವಯ್ಯ ಕೃಷ್ಣ || ತಂದೆತಾಯಿಯು ಇಲ್ಲ ಬಂಧುಬಳಗವು ಇಲ್ಲ ಇಂದೇನು ತೆರಹೇಳೆ ಕೃಷ್ಣ ಮಂದರಧರ ಶ್ರೀಪುರಂದರವಿಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು