ಪಾಲಿಸೆಮ್ಮ ಮುದ್ದುಶಾರದೆ

ಪಾಲಿಸೆಮ್ಮ ಮುದ್ದುಶಾರದೆ

ರಾಗ ಮುಖಾರಿ/ಆದಿ ತಾಳ ಪಾಲಿಸೆಮ್ಮ ಮುದ್ದುಶಾರದೆ ಎನ್ನ ನಾಲಿಗೆಯಲಿ ತಪ್ಪು ಬಾರದೆ || ಪಲ್ಲವಿ || ಲೋಲಲೋಚನೆ ತಾಯೆ ನಿರುತ ನಂಬಿದೆ ನಿನ್ನ || ಅನುಪಲ್ಲವಿ || ಅಕ್ಷರಕ್ಷರ ವಿವೇಕವಾ ನಿಮ್ಮ ಕುಕ್ಷಿಯೊಳೀರೇಳು ಲೋಕವ ಸಾಕ್ಷಾತು ರೂಪದಿಂದ ಒಲಿದು ರಕ್ಷಿಸು ತಾಯೆ || ೧ || ಶೃಂಗಾರಪುರ ನೆಲೆವಾಸಿನೀ ದೇವಿ ಸಂಗೀತಗಾನವಿಲಾಸಿನೀ ಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ || ೨ || ಸರ್ವಾಲಂಕಾರ ದಯಾಮೂರುತಿ ನಿಮ್ಮ ಚರಣವ ಸ್ಮರಿಸುವೆ ಕೀರುತಿ ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ || ೩ || ~~~~ * ~~~~ ಅಕ್ಷರಕ್ಷರ ವಿವೇಕವಾ -- ಅಕ್ಷರವೆಂದರೆ ನಾಶವಿಲ್ಲದಿರುವ ಮುಕ್ತಿ, ಕ್ಷರವೆಂದರೆ ಇದ್ದು ಹೋಗುವ ಪ್ರಾಕೃತಿಕ ಸಂಪತ್ತು, ಇವೆರಡರ ನಡುವೆ ಇರುವ ಭೇದವನ್ನು ಮನಗಾಣುವುದು ವಿವೇಕ ; ನಿತ್ಯಾನಿತ್ಯ ವಸ್ತುವಿವೇಕವೆಂದೂ ಕರೆಯುತ್ತಾರೆ. ಆಧ್ಯಾತ್ಮಿಕ ಸಾಧನೆಯಲ್ಲಿ ಇದು ಮುಖ್ಯವಾದ ಅಂಗ. ನಿಮ್ಮ ಕುಕ್ಷಿಯೊಳೀರೇಳು ಲೋಕವ -- ದೇವಿಯ ಹೊಟ್ಟೆಯೊಳಗೆ ಹದಿನಾಲ್ಕು ಲೋಕಗಳೂ (ಈರೇಳು, ಎರಡು ಏಳು) ಅಡಗಿವೆ. [ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು