ಪಾಪಿ ಬಲ್ಲನೆ ಪರರ ಸುಖದುಃಖವ

ಪಾಪಿ ಬಲ್ಲನೆ ಪರರ ಸುಖದುಃಖವ

(ರಾಗ ಮುಖಾರಿ ಝಂಪೆ ತಾಳ) ಪಾಪಿ ಬಲ್ಲನೆ ಪರರ ಸುಖ ದುಃಖವ ಕೋಪಿ ಬಲ್ಲನೆ ಶಾಂತ ಸುಗುಣದ ಘನವ||ಪ|| ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ ಮೃತ್ಯು ಬಲ್ಲಳೆ ವೇಳೆ ಹೊತ್ತೆಂಬುದ ತೊತ್ತು ಬಲ್ಲಳೆ ಮಾನಾಪಮಾನವೆಂಬುದನು ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲವ (/ ಕೊತ್ತಿ* ಬಲ್ಲುದೆ ಹಾಲು ಮೀಸಲೆಂಬುದನು)||೧|| ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ ಶ್ವಾನ ಬಲ್ಲುದೆ ರಾಗ ಭೇದಂಗಳ ಮೀನು ಬಲ್ಲುದೆ ನೀರು ಸೌಳು ಸ್ವಾದೆಂಬುದನು ಹೀನ ಬಲ್ಲನೆ ಸುಗುಣ ದುರ್ಗುಣವನು ||೨|| ಬಾಳೆ ಬಲ್ಲುದೆ ಮರಳಿ ಫಲವಾಗೊ ಸುದ್ದಿಯನು ಸೂಳೆ ಬಲ್ಲಳೆ ಗೆಳೆಯಗಿಹ ಬಡತನ ಕೇಳ ಬಲ್ಲನೆ ಕಿವುಡನೇಕಾಂತ ಮಾತುಗಳ ಹೇಳ ಬಲ್ಲನೆ ಮೂಕ ಕನಸು ಕಂಡುದನು ||೩|| ಕಾಗೆ ಬಲ್ಲದೆ ಒಳ್ಳೆ ಕೋಗಿಲೆಯ ಸ್ವರವನು ಗೂಗೆ ಬಲ್ಲುದೆ ಹಗಲ ಹರಿದಾಟವ ಜೋಗಿ ಬಲ್ಲನೆ ಮನೆಯೊಳಿಲ್ಲ ಉಂಟೆಂಬುದನು ರೋಗಿ ಬಲ್ಲನೆ ಮೃಷ್ಟಾನ್ನದ ರುಚಿಯನು ||೪|| ಹೇಡಿ ಬಲ್ಲನೆ ರಣದ ಸಾಹಸದ ಶೌರ್ಯವನು ಕೋಡಗವು ಬಲ್ಲುದೆ ರತ್ನದ ಬೆಲೆಯನು ಬೇಡಿದುದ ಕೊಡಲು ಪುರಂದರ ವಿಠಲನಲ್ಲದೆ ನಾಡದೈವಗಳೇನು ಕೊಡಬಲ್ಲವೋ ||೫|| (* ಕೊತ್ತಿ= ಬೆಕ್ಕು)
ದಾಸ ಸಾಹಿತ್ಯ ಪ್ರಕಾರ
ಬರೆದವರು