ಪಾಪಿಗಳೊಳಗೆಲ್ಲ ನಾನು ವೆಗ್ಗಳನೆಂದು
( ರಾಗ ಆರಭಿ ಅಟ ತಾಳ)
ಪಾಪಿಗಳೊಳಗೆಲ್ಲ ನಾನು ವೆಗ್ಗಳನೆಂದು ತಿಳಿಯಲಿಲ್ಲ , ದಯಾ-
ರೂಪ ಕೃಪಾಂಬುಧಿ ನೀನಲ್ಲದಿಲ್ಲವೆಂದರಿಯಲಿಲ್ಲ ||
ಕಾಲ್ಗಳಿಂದಲಿ ತೀರ್ಥಯಾತ್ರೆಯ ನಾನಂತೂ ಮಾಡಲಿಲ್ಲ , ಹರಿ-
ಪಾಲ್ಗಡಲಶಾಯಿ ನಿನ್ನ ದಿವ್ಯಕಥೆಯನ್ನು ಕೇಳಲಿಲ್ಲ
ಕೂಳ್ಗಳಾಶೆಯಿಂದ ನಿನ್ನ ನೈವೇದ್ಯವನುಣ್ಣಲಿಲ್ಲ , ಇಂಥ
ಸಾಲ್ಗಳ ಪಾಪದಿಂ ಎನ್ನ ಪಾಲಿಪ ಸ್ವಾಮಿ ನೀನೆಯಲ್ಲ ||
ಕಣ್ಣುಗಳಿಂದ ನಿನ್ನಯ ದಿವ್ಯ ಮೂರ್ತಿಯ ನೋಡಲಿಲ್ಲ , ಶ್ರುತಿ-
ಸನ್ನುತ ಮಹಿಮೆಯ ಅನುದಿನ ನಾನು ಕೊಂಡಾಡಲಿಲ್ಲ
ಹೆಣ್ಣು ಹೊನ್ನು ಮೆಚ್ಚಿ ನಿನ್ನ ದಾಸರ ದಾಸ್ಯ ಮಾಡಲಿಲ್ಲ , ಮುನಿ-
ಸನ್ನುತ ವರಪಾದಪದ್ಮಯುಗಂಗಳ ಸ್ಮರಿಸಲಿಲ್ಲ ||
ಕರದಿಂದ ನಿನ್ನ ಸುಮೂರ್ತಿಪೂಜೆಯನ್ನು ಮಾಡಲಿಲ್ಲ , ಇಹ-
ಪರ ಎರಡನು ಬಿಟ್ಟು ವಿಷಯದೊಳನುದಿನ ಬಾಳ್ವೆನಲ್ಲ
ಗುರುಹಿರಿಯರ ಮಾತ ಕೇಳದೆ ನಾ ಬಲು ಕೆಟ್ಟೆನಲ್ಲ , ಹರಿ
ಪರಮ ಪುರುಷ ನೀನಲ್ಲದೆ ಜಗದೊಳು ಕಾವರಿಲ್ಲ ||
ಹೊಟ್ಟೆಯಾಸೆಗಾಗಿ ದುಷ್ಟರ ಸೇವೆಗೆ ನಿಂತೆನಲ್ಲ , ಯಮ
ಕುಟ್ಟಿ ಕೊಲ್ಲಧಾಂಗೆ ನೀನೆ ರಕ್ಷಿಸಬೇಕು ಸಿರಿಯನಲ್ಲ
ಅಷ್ಟೂ ತತ್ವೇಶರ ಸ್ವಾಮಿ ನೀನಲ್ಲದೆ ಬೇರೆ ಇಲ್ಲ, ಇನ್ನು
ದುಷ್ಟಕೃತ್ಯಕೆ ಮನವೆರಗದಂದದಿ ಮಾಡು ಶ್ರೀ ಗೋಪಾಲ ||
ಜಗದೊಳಗೆನ್ನಂಥಾ ಪಾಪಿಗಳಿನ್ಯಾರು ಇಲ್ಲವಲ್ಲ , ಹರಿ-
ಸುಗುಣಪೂರ್ಣ ನಿನ್ನಂಥ ಕೃಪಾಂಬುಧಿ ಜಗದೊಳಿಲ್ಲ
ನಿಗಮಗೋಚರ ನಿನ್ನ ಮಹಾಮಹಿಮೆಯ ನಾನು ತಿಳಿಯಲಿಲ್ಲ
ಜಗದ್ಗುರುವಿನ ಗುರುವೆ ಪುರಂದರವಿಠಲ ನೀನಲ್ಲದಿನ್ನಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments