ಪರಾಕು ಮಾಡದೆ
(ರಾಗ ಸಾವೇರಿ ಆದಿ ತಾಳ)
ಪರಾಕು ಮಾಡದೆ ಪರಾಮರಿಸಿ ಎನ್ನ
ಅಪರಾಧಂಗಳ ಕ್ಷಮಿಸೊ ||ಪ||
ಧರಾರಮಣ ಫಣಿಧರಾರ್ಚಿತ
ಸುರಾಧಿಪತಿ ವಿಧಿ ಹರಾದಿವಂದಿತ ||ಅ.ಪ||
ನರರೊಳಗೆ ಪಾಮರನು ನಾನಿಹ-
ಪರಕೆ ಸಾಧನವರಿಯೆ ಶ್ರೀಹರಿಯೆ
ಶರಣು ಹೊಕ್ಕೆ ನಿನ್ನ ಚರಣ ಕಮಲಕ್ಕೆ
ಕರುಣದಿಂ ನಿನ್ನ ಸ್ಮರಣೆ ಎನಗಿತ್ತು ||
ಜಪವನರಿಯೆನು ತಪವನರಿಯೆನು
ಉಪವಾಸ ವ್ರತಗಳನರಿಯೆ ಶ್ರೀ ಹರಿಯೆ
ಕೃಪಾವಲೋಕನದಿಂದ ಆ ಪಾಪಗಳನೆಲ್ಲ
ಅಪಾಹತವ ಮಾಡೊ ಅಪಾರ ಮಹಿಮನೆ ||
ಕರಿಯ ರಕ್ಷಿಸಿ ದ್ರೌಪದಿಯ ಮೊರೆ ಲಾಲಿಸಿ
ತರಳಗೊಲಿದು ನೀ ಪೊರೆದೆ ದಯದೆ
ಸಿರಿಯರಸ ನಿನ್ನ ಸರಿಯಾರು ಕಾಣೆ
ಕರುಣಿಸಯ್ಯ ಶ್ರೀ ಪುರಂದರ ವಿಟ್ಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments