ಪರಮ ಸಂಜೀವನವು ಗುರು ನಿಮ್ಮ ನಾಮ
( ತಿಲಕಕಾಂಬೋದ ರಾಗ ಝಂಪೆತಾಳ)
ಪರಮ ಸಂಜೀವನವು ಗುರು ನಿಮ್ಮ ನಾಮ
ಸುರಮುನಿಯು ಸೇವಿಸುವ ದಿವ್ಯನಾಮ ||ಪ||
ಕರಿಯ ಮೊರೆಯನು ಕೇಳಿ ದುರಿತ ಹರಿಸಿದ ನಾಮ
ಮೊರೆಯ ಹೊಕ್ಕವರ ಸ್ಥಿರ ಹೊರೆವ ನಾಮ
ತರಳ ಪ್ರಹ್ಲಾದನವಸರಕೆ ಒಲಿದಿಹ ನಾಮ
ಸ್ಮರಿಸುವರ ವಜ್ರಪಂಜರ ನಿಮ್ಮ ನಾಮ||೧||
ಧರೆಯೊಳಗೆ ದ್ರೌಪದಿಯ ಸ್ಮರಣೆಗೊದಗಿದ ನಾಮ
ಕರುಣದಿಂದಭಿಮಾನಗಾಯ್ದ ನಾಮ
ದಾರಿದ್ರ್ಯವನು ಸುಧಾಮನಿಗ್ಹಿಂಗಿಸಿದ ನಾಮ
ಸಿರಿಸಂಪತ್ತಿಯು ಆಯಿತೀ ನಾಮ ||೨||
ಹರುಷಕರವಿತ್ತು ಉಪಮನ್ಯುಗೊಲಿದ ನಾಮ
ಕ್ಷೀರಸಾಗರದಲಿಪ್ಪ ನಾಮ
ಶರಣುಹೊಕ್ಕವರ ಪರಿಪರಿ ಕಾಯ್ದ ನಾಮ
ಧೀರಧ್ರುವಗಚಲಪದವಿತ್ತ ನಾಮ ||೩||
ಕರೆದು ನಾರಗನೆಂದವನ ತಾರಿಸಿದ ನಾಮ
ಪರಮಪಾತಕ ಪರಿಹರಿಸಿದ ನಾಮ
ವರಮುನಿಜನರ ತೃಪ್ತಿಗೈಸುವ ನಾಮ
ಪರಮಭಕ್ತರ ಪ್ರಾಣಪ್ರಿಯ ನಾಮ ||೪||
ದುರಿತದಾರಿದ್ರ್ಯ ವಿಧ್ವಂಸಗೈಸುವ ನಾಮ
ಕರುಣಸಾಗರ ಪರಿಪೂರ್ಣ ನಾಮ
ನರಕೀಟಕ ಮಹೀಪತಿಯ ತಾರಕ ನಾಮ
ಪರಮಸಾಯುಜ್ಯ ಗುರುದಿವ್ಯನಾಮ ||೫||
----- ಮಹೀಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments