ಪತಿಭಕುತಿ ಇಲ್ಲದಿಹ ಸತಿಯ ಸಂಗ
( ರಾಗ ಕಾಂಭೋಜ. ಛಾಪು ತಾಳ)
ಪತಿಭಕುತಿ ಇಲ್ಲದಿಹ ಸತಿಯ ಸಂಗ
ವ್ರತಗೆಟ್ಟು ಸುಖ ಪಡೆಯಲಿಲ್ಲವೋ ರಂಗ ||ಪ||
ಗಂಡ ಬಂದರೆ ಎದ್ದು ನಿಲ್ಲದೆ ಮಂಚದ ಮೇಲೆ
ಚಂದದಲಿ ಕುಳಿತು ಮಾತಾಡುತಿಹಳ
ಅಂದೆಲ್ಲವನು ಮೀರಿ ಕಾಡಿ ಬೇಡುವ ಸತಿಯು
ಗಂಡುತೊತ್ತಿನ ಸಂಗವಭಿಮಾನ ಭಂಗ ||
ಒಂದು ತಂದರೆ ಮನೆಗೆ ಹತ್ತೆಂದು ಭಾವಿಸದೆ
ತಂದರೆ ಹತ್ತು ಮನೆಲೊಂದು ಮಾಡಿ
ಇಂದೇನಿಲ್ಲವೊ ಎಂದು ಮುಖ ಮೂರು ಕಡೆ ತಿರುವಿ-
ಕೊಂಡು ಹೋಗುವ ನಾರಿ ದೊಡ್ಡ ಬಕಮಾರಿ ||
ಮಕ್ಕಳಿಗೆ ಕೊಡಲಿಲ್ಲ ಮರಿಗಳಿಗೆ ಇಡಲಿಲ್ಲ
ನಾಲ್ಕುವರೆ ಬಣ್ಣ ಭಂಗಾರವಿಲ್ಲ
ಚಿಕ್ಕವಳು ನಿನ್ನ ಕೈಪಿಡಿದು ಕೆಟ್ಟೆನೆಂಬ
ಮುಕ್ಕು ತೊತ್ತೆಯ ಸಂಗವಭಿಮಾನ ಭಂಗ ||
ತಾಯ ಹೊರಡಿಸು ತಂದೆ ಮೊದಲೆ ದಾಯಾದ್ಯರ
ಮಾಯೆಯನು ಬಿಡು ನಿನಗೆ ಬೇಕಾದರೆ
ನ್ಯಾಯದಲಿ ಬೇರೆ ಮನೆಯನು ಕಟ್ಟು ಎಂದೆಂಬ
ಮಾಯಗಾತಿಯ ತೊತ್ತು ಹೆಡತಲೆಯ ಮೃತ್ಯು ||
ಅಣ್ಣ ತಮ್ಮಂದಿರಾ ಹೆಣ್ಣು ಒಡಹುಟ್ಟಿದರ
ಇನ್ನು ಬಿಡು ನಾ ನಿನಗೆ ಬೇಕಾದರೆ
ಬಿನ್ನಣೆಯ ಮಾತಾಡಿ ಕ್ಲೇಶಬಡಿಪಳ ಬಿಡಿಸಿ
ಚೆನ್ನ ಶ್ರೀಪುರಂದರವಿಠಲ ದಯಮಾಡೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments