ಪಂಥ ಬೇಡಿ ಪ್ರಾಣಿಗಳಿರ
(ಉದಯರಾಗ ಆದಿತಾಳ)
ಪಂಥ ಬೇಡಿ ಪ್ರಾಣಿಗಳಿರ ||ಪ||
ಸಂತತ ಹರಿದಾಸರಾಗಿ ಅಂತಕಪುರ ಸುಖವಿಲ್ಲ ಯಮನು ಬಹು ಹೊಲ್ಲ ||ಅ||
ಕಡೆಯ ಝಾಮದಲೆದ್ದು ಹರಿಯ ಸ್ಮರಣೆಯ ಮಾಡಿ
ನುಡಿ ಹರಿಯ ಕೀರ್ತನೆ ಒಡನೆ ಮಾಡಿ
ಕಡುಸ್ನೇಹದಲ್ಲಿ ಕರವ ಪಾದಕಮಲದಲಿಟ್ಟು
ಬಿಡದೆ ಸೇವೆಯ ಮಾಡೋ ಚಿತ್ತವಲ್ಲಿಡೊ ||
ಮಧ್ವಮತವನೆ ಭಜಿಸೊ ಮದನನಯ್ಯನ ಒಲಿಸೊ
ಉದ್ಧರಿಸೊ ನಿನ್ನ ಕುಲವ ಛಲವು ಬೇಡ
ಸಿದ್ಧಾಂತನೆಂದೆನಿಸೊ ಸಜ್ಜನ ಸಂಗವ ಬಯಸೊ , ಅ-
ಬದ್ಧ ಮಾತನೆ ತ್ಯಜಿಸೊ ಹರಿಯ ಭಜಿಸೊ ||
ಪ್ರೇಮದಲಿ ಘನಸುಖ ನೇಮದಲಿ ಹರಿಸಖ
ದುರ್ಮತಗಳ ಬಿಟ್ಟು ದುಷ್ಟರ ಸಂಗ ಅಟ್ಟು
ಅಮರಪತಿ ಗಣಪ್ರಿಯ ಪುರಂದರವಿಠಲನ್ನ
ಕ್ರಮದಿಂದ ಮೊರೆಹೊಕ್ಕು ನಂಬಿ ಸುಖದಕ್ಕೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments