ನೋಡಿ ದಣಿಯವು ಕಂಗಳು

ನೋಡಿ ದಣಿಯವು ಕಂಗಳು

(ರಾಗ ಸಾವೇರಿ ಝಂಪೆ ತಾಳ ) ನೋಡಿ ದಣಿಯವು ಕಂಗಳು ರೂಢಿಯೊಳಗತ್ಯಧಿಕ ರಂಗೇಶನತಿ ಚೆಲುವ || ಪ|| ಕೆಂದಾವರೆಯ ಪೋಲ್ವ ಪದಗಳಿಗೆ ನವರತ್ನ ಅಂದುಗೆಯ ಮೇಲೆ ಹೊಂಗೆಜ್ಜೆ ಪೊಳೆಯೆ ಅಂದದಿಂ ಸಕಲ ದೇವೋತ್ತಮರ ಮುಕುಟದೊಲ- ವಿಂದ ಬೆಳಗುತಿಹ ಕೋಮಲ ಪದಾಬ್ಜಗಳ || ಥಳಥಳಿಪ ಶಶಿಯ ಕಾಂತಿಯ ಜರೆವ ಮುಖಕಾಂತಿ ಪೊಳೆವ ಜಾನುವಿನ ಜಂಘೆಯ ಸೊಂಪಿನ ಪೊಳೆವ ಊರುಗಳ ಪೀತಾಂಬರಾಹಿತ ಮಧ್ಯ ಸುಳಿನಾಭಿ ತ್ರಿವಳಿ ಮಣಿಖಚಿತ ವೃಂದಗಳ ಮಿಗೆ || ಶ್ರೀ ವತ್ಸಲಾಂಛನ ಕುಂಡಲ ಪ್ರಭೆಯು ಶ್ರೀ ವಾಸುದೇವನ ಸ್ಮಿತವದನದ ಪಾವನಾತ್ಮಕನ ಚಂಪಕನಾಸಿಕದ ಬೆಡಗು ದೇವದೇವನ ನಯನಗಳ ಕಡು ಚೆಲುವ || ಮದನಕಾರ್ಮುಕಕೆ ಮಾರ್ಮಲೆವ ಪುರ್ಬಿನ ಗಾಡಿ ಮುದವೀವ ಕರ್ಣಕುಂಡಲವು ಪೊಳೆಯೆ ಪದುಮನಾಭನ ಪಣೆಯ ಕಸ್ತೂರಿತಿಲಕವನು ಯದುಕುಲೋತ್ತಮನ ಮಣಿಖಚಿತ ವೃಂದಗಳ ಮಿಗೆ || ಉಭಯ ಕಾವೇರಿಮಧ್ಯದಿ ಶೇಷತಲ್ಪದೊಳು ಶುಭ ಕ್ರಿಯಾಮೃತ ಶ್ರೀ ಲತಾಂಗಿ ಸಹಿತ ಅಭಯವನು ಭಕುತರಿಗೆ ಅನವರತ ಕರೆದೀವ ಪುರಂದರವಿಠಲನ ಪದಯುಗಳ ಕಡು ಚೆಲುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು