ನೋಡಿರೈ ಕಲ್ಪಭೂರುಹರೆನಿಪರ ನೋಡಿರೈ

ನೋಡಿರೈ ಕಲ್ಪಭೂರುಹರೆನಿಪರ ನೋಡಿರೈ

(ರಾಗ ಮಧ್ಯಮಾವತಿ ಅಟತಾಳ) ನೋಡಿರೈ ಕಲ್ಪಭೂರುಹರೆನಿಪರ ನೋಡಿರೈ ನಾಡೊಳು ಹರಿದಾಸರು ನರರೆ ||ಪ|| ಹರಿಯ ಪಾದದ ನೀರು ಧರೆಯೆಲ್ಲ ಸಲಹಿತು ಹರಿಯುಂಡ ಚರುವು ಪ್ರಸಾದವಾಯಿತು ಹರಿದಾಸರುಗಳೆಂಬ ನಾಮಧಾರಿಗಳನ್ನು ನರರೆನ್ನಬಹುದೆ ಸುರರಿಗಧಿಕರನ್ನು || ನೀರು ಕೂಡಿದ ಹಾಲು ನೀರೆನ್ನಬಹುದೆ ನೀರೊಳ್ಪುಟ್ಟಿದ ಮುತ್ತು ನೀರಹುದೆ ಆರಿದ ಭಾಂಡವು ಮೃತ್ತಿಕೆಯಹುದೆ , ನಮ್ಮ ಶೌರಿಯ ಶರಣರ ನರರೆನ್ನಬಹುದೆ || ಪರಬ್ರಹ್ಮ ವಿಷ್ಣುವಿನ ಕರಪೂಜ್ಯ ವೈಷ್ಣವರ ಪರಿಕಿಸಲರಿಯರು ಮತಿಭ್ರಷ್ಟರು ಸಿರಿಗುರು ಪುರಂದರವಿಠಲನ ದಾಸರ ನರರೆಂದ ನರರಿಗೆ ರೌರವನರಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು