ನೋಡಬನ್ನಿರೋ ಜನರು

ನೋಡಬನ್ನಿರೋ ಜನರು

(ರಾಗ ಪೂರ್ವಿ ಅಟತಾಳ ) ನೋಡ ಬನ್ನಿರೋ ಜನರು, ಶ್ರೀ ಕೃಷ್ಣನ ಜೋಡು ದೀವಟಿಗೆ ಸೇವೆ ||ಪ|| ನೋಡಿಯ ನಮ್ಮಯೆ ಮನದ ಇಷ್ಟಾರ್ಥವ ಬೇಡಿ ಶರಣು ಪೊಗುವ ಪದಯುಗವ ||ಅ|| ಅಂಜಿಕೆ ಪರಿಹರ ಅಸುರ ಭಂಜನನಾದ ಕಂಜಾಕ್ಷ ಶ್ರೀ ಕೃಷ್ಣನಿದಿರೊಳು ನಿಂದು ಸಂಜೆಯ ವೇಳ್ಯದಿ ರಾಜಿಪ ರಜತದ ಪಂಜುಸೇವೆಯ ಕರಾಂಜಲಿಯನೆ ಮುಗಿದು || ನೆರೆದ ಜನರ ಮುಂದೆ ಗುರುರಾಯ ತಾ ಬಂದು ಕರವ ಮುಗಿದು ನಿಂದಿರುತಿಪ್ಪ ಸಮಯದಿ ಪರಿಪರಿ ವಿನಿಯೋಗದವರೆಲ್ಲ ತಾವ್ತಮ್ಮ ಸರತಿ ತಪ್ಪದೆ ಬಂದು ಇರುತಿಪ್ಪ ಸೊಬಗನು || ಪಂಚ ಮುಖದ ಜ್ಯೋತಿ ಬೆಳಗಲು ಎಡಬಲ ಸಂಚರಿಸುವ ಪೊಮ್ಮರಿ ಮೃಗ ಚೌರಿಯ ಕಾಂಚನಮಯದ ಕಟ್ಟಿಗೆ ಕೋಲ ಹಸುವಿನ(/ಹಸುರಿನ?) ಲಾಂಛನವಾದಗೆ ಹಾಕುವ ಪರಿಯ || ಬಟ್ಟಲ ವೀಳ್ಯ ವಿಶಿಷ್ಟ ಲಾಜಾಕ್ಷತೆ ಪುಟ್ಟ ಕದಳಿ ಬೆಲ್ಲ ಕಸ್ತೂರಿಗಳಿಂದ ಕೃಷ್ಣರಾಯನ ಮುಂದಿಟ್ಟು ಸಮರ್ಪಿಸಿ ಹೊ- ತ್ತಿಟ್ಟ ಆರತಿ ಶ್ರೇಷ್ಠರೆತ್ತುವುದನ್ನು || ದೇವದೇವೋತ್ತಮ ದೇವೇಶನೆನುತಲಿ ಭಾವಶುದ್ಧದಿ ಭಕ್ತರು ಸ್ತುತಿಗೈಯ್ಯುತ್ತ ಗೋವಳರಾಯನೆ ಜಯಶೀಲನಾಗೆಂದು ಗೋವಿಂದ ಎನುತಲೆ ಘೋಷ ಮಾಳ್ಪುದನು || ಭಯನಿವಾರಣ ಭಕ್ತ ದುರಿತನಿವಾರಣ ಹರಿ ಕೃಷ್ಣ ಪರದೈವ ಪರಮಪುರುಷನೆಂದು ಸ್ಮರಣೆಯಿಂದಲಿ ಮನವೆರಸಿ ವಂದಿಸಿ ತ- ಚ್ಚರಣವ ನೋಡಿಯೆ ಕರುಣಪಡೆವರೆ || ಮಧ್ವ ರಾಯರ ಮತಕದ್ವೈತನಾಗಿಯೆ ಸಿದ್ಧವಾಗಿಹ ಫಲವೆದ್ದು ತೋರಿದ ತೆರ ಉದ್ದರಿಸಿವೆನೆಂಬ ಪುರಂದರವಿಠಲ ಮುದ್ದು ಶ್ರೀ ಕೃಷ್ಣನ ಮೂರುತಿ ಮಹಿಮೆಯ || - ಇಲ್ಲಿ ಅಂಕಿತವು ಪುರಂದರವಿಠಲ ಎಂದಿರುವದಾದಾದರೂ ಇದು 'ವರಾಹ ತಿಮ್ಮಪ್ಪ' ಅಂಕಿತವನ್ನು ಬಳಸುವ 'ನೆಕ್ಕರ ಕೃಷ್ಣದಾಸ'ರ ರಚನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು