ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಿಲ್ಲ
(ರಾಗ ಸೌರಾಷ್ಟ್ರ ಅಟ ತಾಳ )
ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಿಲ್ಲ ನಿಶ್ಚಯವೆಚ್ಚರಿಕೆ ||ಪ||
ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕ್ಕೆ ಮೆಚ್ಚು ಕೇಳೆಚ್ಚರಿಕೆ ||ಅ||
ಪೊಡವಿಪನೊಲುಮೆಯ ಕಡುನೆಚ್ಚಿ ಗರ್ವದಿ ನಡೆಯದಿರೆಚ್ಚರಿಕೆ
ಕೊಡನ ಅಂಧಕ ಪೊತ್ತು ನಡೆವಂತೆ ಅಧಿಕಾರ ಕಡೆಯಲ್ಲಿ ಎಚ್ಚರಿಕೆ
ಕಡುಚಳಕನು ತಾನೆನುತ್ತ ಪರರ ಅವಘಡಿಸದಿರೆಚ್ಚರಿಕೆ
ಬಡಬಗ್ಗರ ಬಾಯ ಬಡಿದು ಪಾಪದಿ ಹೆಜ್ಜೆ ಇಡಬೇಡ ಎಚ್ಚರಿಕೆ ||
ದೊರೆ ಎನ್ನ ಬಲವು ಸುಸ್ಥಿರವೆಂದೆಲ್ಲರ ಹಗೆ ತರವಲ್ಲ ಎಚ್ಚರಿಕೆ
ಉರಗನ ಮುತ್ತಿ ಕಟ್ಟಿರುವೆಯು ಕೊರೆದಂತ ತೆರನಪ್ಪುದೆಚ್ಚರಿಕೆ
ಕರವ ಮುಗಿದು ಸಜ್ಜನರಿಗೆ ಶಿರ ಬಾಗಿ ಚರಿಸುತಿರೆಚ್ಚರಿಕೆ
ಸಿರಿಸೊಡರಿಗೆ ಗುರುಹಿರಿಯರ ಅವಮಾನ ಬಿರುಗಾಳಿ ಎಚ್ಚರಿಕೆ ||
ಲೋಕಾಪವಾದಕೆ ಅಂಜಿ ನಡೆವುದು ವಿವೇಕ ಕೇಳೆಚ್ಚರಿಕೆ
ನಾಕೇಶಗಾದರು ಬಿಡದಪಕೀರ್ತಿ ಪರಾಕು ಕೇಳೆಚ್ಚರಿಕೆ
ಕಾಕು ಜನರ ಚಾಡಿ ನೀ ಕೇಳಿ ಕೋಪೋದ್ರೇಕ ಬೇಡೆಚ್ಚರಿಕೆ
ಭೂಕಾಂತೆ ನಡುನಡುಗುವಳು ನಿಷ್ಠುರವಾದ ವಾಕು ಬೇಡೆಚ್ಚರಿಕೆ ||
ನಳಮಾಂಧಾತರೇನಾದರೆಂಬುದ ನೀ ತಿಳಿದು ನೋಡೆಚ್ಚರಿಕೆ
ಅಳಿವುದು ಕಾಯವು ಉಳಿವುದೊಂದೇ ಕೀರ್ತಿ ಇಳೆಯೊಳಗೆಚ್ಚರಿಕೆ
ಅಳಲಿಸಿ ಪರರನು ಗಳಿಸಿ ತಂದರ್ಥವು ಉಳಿಯದು ಎಚ್ಚರಿಕೆ
ಉಳಿದಲ್ಪ ಕಾಲವು ಧರ್ಮದ ಹಾದಿಯ ಹಳಿಯಬೇಡೆಚ್ಚರಿಕೆ ||
ಪರಸತಿ ಧನ ಅಪಹರಿಸಲು ಸಿರಿ ಮೊಗದಿರುಹುವಳೆಚ್ಚರಿಕೆ
ನೆರೆ ಛಿದ್ರಕುಂಭದ ನೀರಿನಂತಾಯುಷ್ಯ ಸರಿಯುತಿದೆಚ್ಚರಿಕೆ
ಬರುವ ಹಾನಿ ವೃದ್ಧಿ ತನ್ನ ಕಾಲವ ಮೀರಲರಿಯದು ಎಚ್ಚರಿಕೆ
ವರದ ಪುರಂದರವಿಠಲನ ಚರಣವ ಮರೆಯದಿರೆಚ್ಚರಿಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments