ನೀ ಕೊಡೆ ನಾ ಬಿಡೆ
(ರಾಗ ಶಂಕರಾಭರಣ ಅಟ ತಾಳ )
ನೀ ಕೊಡೆ ನಾ ಬಿಡೆ ಕೇಳಯ್ಯ ರಂಗ
ಗೋಕುಲಪತಿ ಗೋವಿಂದಯ್ಯ ||ಪ||
ನೋಡುವೆ ನಿನ್ನನು ಪಾಡುವೆ ಗುಣಗಳ
ಬೇಡುವೆ ಕಾಡುವೆ ನಾಡೊಳಗೆ
ಮೋಡಿಯ ಬಿಡು ಬಿಡು ಮೊದಲಿಗ ಬಡ್ಡಿಯ
ಕಾಡಲಿ ತುರುಗಳ ಕಾಯ್ದ ರನ್ನ ||
ಎಂಟಕ್ಷರವಿದೆ ಹೃದಯಸಾಕ್ಷಿಗಳಿವೆ
ಗಂಟೆಗೆ ಮೋಸವೆ ದಾಸನಿಗೆ
ಎಂಟೆಟೆನಿಸುವ ಬಂಟನ ಕೈಯಲಿ
ತುಂಟತನವ ಬಿಡೊ ತುಡುಗರಸೊ ||
ಅಪ್ಪ ಶ್ರೀ ಕೃಷ್ಣನೆ ಅಮರರಿಗೊಲಿದನೆ
ಸರ್ಪನ ಮೇಲೊರಗಿಪ್ಪವನೆ
ಒಪ್ಪಿಸಿ ಕೊಟ್ಟರೆ ಪುರಂದರವಿಠಲನ
ಒಪ್ಪುತ ಪಾಡುವೆ ನಡೆ ಮನೆಗೆ ||
( ಪಾಠಾಂತರ :-
ಆಗಭೋಗಗಳಿವೆ ಅನುಭೋಗಗಳಿವೆ
ಈಗಲೆ ಕೊಡೆನಗೆ ಮುಕ್ತಿಯನು
ನಾಗಶಯನ ಶ್ರೀಪುರಂದರವಿಠಲನೆ
ಬೇಗನೆ ಕೊಡು ಸಾಯುಜ್ಯವನು || )
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments