ನೀನ್ಯಾಕೋ ನಿನ್ನ ಹಂಗ್ಯಾಕೋ
(ರಾಗ ಕಾನಡ ಆದಿ ತಾಳ )
ನೀನ್ಯಾಕೊ, ನಿನ್ನ ಹಂಗ್ಯಾಕೋ , ನಿನ್ನ
ನಾಮದ ಬಲವೊಂದಿದ್ದರೆ ಸಾಕೋ
ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿ ಮೂಲನೆಂಬ ನಾಮವೆ ಕಾಯ್ತೋ
ಪ್ರಹ್ಲಾದನ ಪಿತ ಬಾಧಿಸುತಿರುವಾಗ
ನರಹರಿಯೆಂಬ ನಾಮವೆ ಕಾಯ್ತೋ
ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತೋ
ಯಮನ ದೂತರು ಬಂದು ಅಜಾಮಿಳನೆಳೆವಾಗ
ನಾರಾಯಣನೆಂಬ ನಾಮವೆ ಕಾಯ್ತೋ
ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ನಾಮ ಎಂಬ ನಾಮವೆ ಕಾಯ್ತೋ
ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ
ವಾಸುದೇವನೆಂಬೊ ನಾಮವೆ ಕಾಯ್ತೋ
ನಿನ್ನ ನಾಮಕೆ ಸರಿ ಕಾಣೆನು ಜಗದೊಳು
ಘನ್ನ ಮಹಿಮ ಸಿರಿ ಪುರಂದರ ವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments