ನೀನಹುದೊ ಘನಮಹಿಮ ಮುನಿಜನರೊಡೆಯ

ನೀನಹುದೊ ಘನಮಹಿಮ ಮುನಿಜನರೊಡೆಯ

( ಪಟದೀಪ ರಾಗ , ಝಂಪೆತಾಳ) ನೀನಹುದೊ ಘನಮಹಿಮ ಮುನಿಜನರೊಡೆಯ ಪೂರ್ಣ ದೀನದಯಾಳು ನೀನೆ ಹರಿಯೆ ||೧|| ಪತಿತಪಾವನನೆಂದು ಶ್ರುತಿ ಸಾರುವುದು ಕೇಳಿ ಅತಿ ಹರುಷದಿಂದಲಿ ಬಂದೆನೊ ಹರಿಯೆ ||೨|| ಮತಿಹೀನನವಗುಣವ ಕ್ಷಿತಿಯೊಳು ನೀ ನೋಡದೆ ಪಥವಗೊಳಿಸುವುದು ಎನಗೆ ಹರಿಯೆ ||೩|| ಮೊರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ ಕರುಣದ ಅಭಯ ತೋರೊ ಎನಗೆ ಹರಿಯೆ ||೪|| ಅರಿಯೆ ನಾ ನಿಮ್ಮ ಏನಾ ಬ್ಯಾರೆ ಇನ್ನೊಂದು ಪಥ ಶಿರವ ನಮಿಸಿಹೆನೊ ನಿಮಗೆ ಹರಿಯೆ ||೫|| ಶರಣಾಗತರ ಹೊರೆವ ಬಿರುದು ನಿಮ್ಮದು ಪೂರ್ಣ ಸಾರುವುದ ತಿಳಕೊಳಲೊಲ್ಲೆ ಹರಿಯೆ ||೬|| ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು ನೋಡಿ ದಯಮಾಡೊ ಎನಗೆ ಹರಿಯೆ ||೭|| ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ ಸಿರಿ ಸಕಲಪದವು ನೀನೆ ಹರಿಯೆ ||೮|| ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ ಧನ್ಯಗೈಸೊ ನೀ ಪ್ರಾಣವ ಹರಿಯೆ ||೯||
ದಾಸ ಸಾಹಿತ್ಯ ಪ್ರಕಾರ
ಬರೆದವರು