ನಿಮ್ಮ ಭಾಗ್ಯ ದೊಡ್ಡದೋ

ನಿಮ್ಮ ಭಾಗ್ಯ ದೊಡ್ಡದೋ

ರಾಗ ಪಂತುವರಾಳಿ/ತಾಳ ಆದಿ ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ || ಪಲ್ಲವಿ || ಸಮ್ಮತಿಂದ ನಾವು ನೀವು ಸಾಟಿ ಮಾಡಿ ನೋಡುವ ಬನ್ನಿ || ಅನು ಪಲ್ಲವಿ || ಹೇಮ ಹೊನ್ನು ಹಣಗಳಿಗೆ ಹೇರಳ ಭಯಗಳುಂಟು ರಾಮನಾಮ ದ್ರವ್ಯಕಿನ್ನು ಯಾರ ಭಯವಿಲ್ಲವಯ್ಯ || ೧ || ಕಡಗ ಕಂಠಮಾಲೆಗಳಿಗೆ ಕಳ್ಳರ ಅಂಜಿಕೆಯುಂಟು ಅಡವಿ ತುಳುಸಿಮಾಲೆಗಿನ್ನು ಆರ ಅಂಜಿಕಿಲ್ಲವಯ್ಯ || ೨ || ವ್ಯಾಪಾರ ಉದ್ಯೋಗಕಿನ್ನು ವ್ಯಾಕುಲದ ಭಯವುಂಟು ಗೋಪಾಳದ ವೃತ್ತಿಗಿನ್ನು ಗೊಡವೆ ಯಾರದಿಲ್ಲವಯ್ಯ || ೩ || ಸರಕು ಬೆಲ್ಲ ತುಪ್ಪ ಧಾನ್ಯ ಸವೆದೀತೆಂಬ ಚಿಂತೆಯುಂಟು ಹರಿನಾಮಾಮೃತಕೆ ಇನ್ನು ಯಾವ ಚಿಂತೆಯಿಲ್ಲವಯ್ಯ || ೪ || ನಿಮ್ಮ ಭಾಗ್ಯ ಲಕ್ಷ್ಮೀದೇವಿ ನಮ್ಮ ಭಾಗ್ಯ ನಾರಾಯಣನು ನಮ್ಮ ನಿಮ್ಮ ಭಾಗ್ಯದೊಡೆಯ ಪುರಂದರವಿಠಲನು || ೫ || ~~~~ * ~~~~ [ವಿಜಯನಗರದ ಅರಸ ಕೃಷ್ಣದೇವರಾಯನು ಪುರಂದರದಾಸರ ವೈರಾಗ್ಯವನ್ನು ಪರೀಕ್ಷಿಸಬೇಕೆಂದು ಮನಸ್ಸು ಮಾಡಿ, ಅವರೊಂದಿಗೆ ಮಾತಾಡುತ್ತಿರುವಾಗ ಈ ಪದ ಮೈದಳೆಯಿತೆಂದು ಪ್ರತೀತಿ] ಸಮ್ಮತಿಂದ - ಪರಸ್ಪರ ಒಡಂಬಡಿಕೆಯಿಂದ. ಹೇಮ ಹೊನ್ನು - ಈ ಚರಣಕ್ಕೆ ಪಾಠಾಂತರವಿದೆ "ಹೆಣ್ಣು ಹೊನ್ನು ಮಣ್ಣುಗಳಿಗೆ ಕಣ್ಣಿಡುವರಂಜಿಕೆಯುಂಟು ಪನ್ನಗಶಯನನ ನಾಮಕೆ ಯಾರಂಜಿಕೆ ಇಲ್ಲವೋ" ವ್ಯಾಕುಲ - ಲಾಭನಷ್ಟಗಳ ಎಣಿಕೆ [ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು