ನಿನ್ನ ನಾಮವ ನೆನೆದು
(ರಾಗ ನೀಲಾಂಬರಿ ಏಕತಾಳ )
ನಿನ್ನ ನಾಮವ ನೆನೆದು ಪುನೀತನಾದೆನೊ
ಮನ್ನಿಸಿ ಸಲಹಯ್ಯ ಮದನಜನಕ ಕಲ್ಯಾಣ ಕರಿವರದ ||ಪ||
ಮಹಾರಣ್ಯ ಸರಸ್ಸಿನಲ್ಲಿ ಮಕರಿ ಬಾಯೊಳಗೆ ಸಿಲ್ಕಿಕೊಂಡು
ಮಹಾಸಾಮಜನ ಕರಪಿಡಿದೆಳೆವಾಗ ಸಹಾಯ ಒಬ್ಬರ ಕಾಣೆ
ಗಹನದಲಿ ಅಹೋ ವರದಾ ಎಂದು ಕೂಗಿದಾ ಕ್ಷಣದಲಿ
ಸ್ನೇಹದಿಂದಲಿ ನೀನಂಜಬೇಡೆಂದು ಮುಂದೆ ನಿಂದು ಕಾಯಿದ ದೊರೆಯೆ ||
ನಿಜಮತಿಯಾಗಿ ಪಾಪಗಳ ಮಾಡಿ ನಿರಯಾಣ ಸಮಯದಲಿ ಹೇ
ಸುಜನರಕ್ಷಕನೆಂದರಿಯದೆ ತನ್ನ ತ-
ನುಜ ನಾರಗನೆಂದಾ ಕ್ಷಣದಲ್ಲಿ ನೀ-
ನಂಜ ಬೇಡೆಂದು ಮುಂದೆ ನಿಂದು ಕಾಯಿದ ದೊರೆಯೆ ||
ರಜಸ್ವಲೆಯಾದ ದ್ರೌಪದಿಯ ತಂದು ಪಾಪಿ ದುರ್ಯೋದನನು ಧ-
ರ್ಮಜ ಮೊದಲಾದವರ ಮುಂದೆ ಮಾನಗೆಡಿಸುವ ಸಮಯದಲಿ
ವಿಜಯಸಾರಥಿ ಅಹೋ ಪುರಂದರವಿಠಲ ಎಂತೆಂದು ಕೂಗಿದಾ ಕ್ಷಣದಲ್ಲಿ
ಅಂಜಬೇಡೆಂದು ಅಕ್ಷಯವೆನಿಸಿ ನೀ ಮುಂದೆ ನಿಂದು ಕಾಯಿದ ದೊರೆಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments