ನಿನ್ನ ದರುಶನಕೆ ಬಂದವನಲ್ಲವೊ

ನಿನ್ನ ದರುಶನಕೆ ಬಂದವನಲ್ಲವೊ

ರಚನೆ : ವಿಜಯದಾಸರು ಮುಖಾರಿ ರಾಗ, ಝಂಪೆ ತಾಳ ನಿನ್ನ ದರುಶನಕೆ ಬಂದವನಲ್ಲವೊ| ಪುಣ್ಯವಂತರ ಪಾದ ದರುಶನಕೆ ನಾ ಬಂದೆ ||ಪಲ್ಲವಿ|| ಎಲ್ಲೆಲ್ಲಿಯೂ ನಿನ್ನ ವ್ಯಾಪ್ತಿ ತಾನಾಗಿರಲು | ಇಲ್ಲಿಗೇ ಬರುವ ಕಾರಣವಾವುದೋ | ಸೊಲ್ಲಿಗೇ ಸ್ತಂಭದಲಿ ತೋರಿದ ಮಹಾಮಹಿಮ | ಎಲ್ಲಿಲ್ಲವೋ ನೀನು ಬಲ್ಲ ಭಕುತರಿಗೆ ||೧|| ಕರೆದಾಗಲೇ ಓಡಿ ಬಂದೊದಗುವ ಸ್ವಾಮಿ | ಮರಳಿ ಗಾವುದವೆಣಿಸಿ ಬರಲ್ಯಾತಕೆ | ನೆರೆನಂಬಿದವರಿಗಾವಲ್ಲಿಯಾದರೆ ಏನೊ | ಅರಿತವರ ಮನದಲ್ಲಿ ನಲಿದಾಡುವ ಚೆಲುವ ||೨|| ಕಠಿಣವೋ ನಿನ್ನ ಭಕುತರ ನೋಡುವ ಲಾಭ | ಸಟೆಯಿಲ್ಲ ವೇದಗಳು ಸಾರುತಿಹವೋ | ವಟು ಮೊದಲಾದ ಸದ್ವೈಷ್ಣವರ ದಿವ್ಯಾಂಘ್ರಿ| ತೃಟಿಯಾದರೆನಗೆ ಸೋಂಕಲು ಗತಿಗೆ ದಾರಿ ||೩|| ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ | ನೀನಿದ್ದ ಸ್ಥಾನದಲಿ ಸಕಲ ತೀರ್ಥ | ನೀನಿದ್ದ ಸ್ಥಾನದಲು ಸರ್ವ ಸಾತ್ವಿಕರುಂಟು | ನಾನಿಂತು ಬಂದದ್ದು ನಿನಗೆ ತಿಳಿಯದೆ ಸ್ವಾಮಿ ||೪| ಧ್ಯಾನಕೆ ಸಿಲುಕುವೆಡೆ ನಿನ್ನ ಕಾಣಲಿಬಹುದು ಜ್ಞಾನಿಗಳು ಬರುವರೆಂತೋ ಅಲ್ಲಿ ಅನಂತ ಜನ್ಮದಲಿ ಜಪತಪ ವ್ರತಹೋಮ | ಏನು ಮಾಡಿದರಿಷ್ಟು ಜನ ಕೂಡುವುದೊ ದೇವ ||೫|| ಭಳಿರೆ ತಿರುಮಲರಾಯ ನಿನ್ನ ಕರುಣಾರಸಕೆ | ನೆಲೆಗಾಣೆ ನೆಲೆಗಾಣೆ ಈ ಧರೆಯೊಳು | ಒಲಿದು ಭಕ್ತರಿಗಾಗಿ ಮದುವೆ ಹಬ್ಬಿಸಿಕೊಂಡೆ | ಸುಲಭ ದೇವರದೇವ ವಿಜಯ ವಿಠಲರೇಯ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು