ನಿತ್ಯವಲ್ಲ ಅನಿತ್ಯ ದೇಹವಿದಣ್ಣ

ನಿತ್ಯವಲ್ಲ ಅನಿತ್ಯ ದೇಹವಿದಣ್ಣ

(ರಾಗ ಕಾಂಭೋಜ. ಛಾಪು ತಾಳ ) ನಿತ್ಯವಲ್ಲ ಅನಿತ್ಯ ದೇಹವಿದಣ್ಣ ||ಪ|| ಮತ್ತೆ ಮುರಾರಿ ಕೃಷ್ಣನ ನೆನೆಯಲು ಮುಕ್ತಿಗೆ ಸಾಧನವಣ್ಣ ಪ್ರಾಣಿ ||ಅ|| ಮಾನಿನಿಯರ ಕುಚಕೆ ಮರುಳಾಗದಿರು ಮಾಂಸದ ಗಂಟುಗಳಲ್ಲಿ ನಾನಾ ಪರಿಯಲಿ ಮೋಹವ ಪಡದಿರು ಹೀನ ಮೂತ್ರದ ಕುಳಿಯಲ್ಲಿ ಜಾನಕೀರಮಣನ ಧ್ಯಾನವ ಮಾಡಲು ಜಾಣನಾಗುವೆ ಅಲ್ಲಿ, ಪ್ರಾಣಿ || ತಂಡೆ ತಾಯಿ ಅಣ್ಣ ತಮ್ಮಂದಿರು ಬಂಧುಬಳಗದವರೆಲ್ಲ ಹೊಂದಿ ಹೊರೆಯುವ ನೆಂಟರಿಷ್ಟರು ಹರಿದು ತಿಂಬುವರೆಲ್ಲ ಬಂದ್ಯಮದೂತರು ಸೆಳೆದೊಯ್ಯುವಾಗ ಹಿಂದೆ ಬಾಹೋರಿಲ್ಲ, ಪ್ರಾಣಿ || ಕತ್ತಲೆ ಬೆಳದಿಂಗಳ ಸಂಸಾರ ಕಟ್ಟೋ ಧರ್ಮದ ಮಟ್ಟಿ ಚಿತ್ತ ಶುದ್ಧನಾಗಿ ನಡೆಯದಿದ್ದರೆ ವ್ಯರ್ಥವಾಗಿ ನೀ ಕೆಟ್ಟಿ ಚಿತ್ತಜನಯ್ಯ ಶ್ರೀಪುರಂದರವಿಠಲನ ತುತಿಸೊ ಬೇಗ ಮನಮುಟ್ಟಿ, ಪ್ರಾಣಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು