ನಾರಾಯಣ ನಿನ್ನ ನಾಮದ

ನಾರಾಯಣ ನಿನ್ನ ನಾಮದ

(ರಾಗ ಅಸಾವೇರಿ ಅಟತಾಳ) ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ಬಾಯಿಗೆ ಬರಲಿ, ಬಾ ರಂಗ ||ಪ|| ಆಡುವಾಗ ನಲಿದಾಡುವಾಗಲಿ ನೋಡುತ ನಿಂದು ಮಾತಾಡುವಾಗ ಕೇಡುತನದಿಂದ ಕೂಡಿ ಈ ಭವದೊಳು ಮಾಡಿದ ಪಾಪವು ಓಡಿ ಹೋಗುವ ಹಾಗೆ || ಉರಿ ಬಂದಾಗಲಿ ಛಳಿ ಬಂದಾಗಲಿ ಗಡಗಡ ನಡುಗುತ್ತಿರುವಾಗಲಿ ಹರಿ ನಾರಾಯಣ ದುರಿತ ನಿವಾರಣ ಇರುಳು ಹಗಲು ನಿನ್ನ ಸ್ಮರಣೆ ಮಾಡುವಂತೆ || ಕಷ್ಟವಾಗಿರಲಿ ಉತ್ಕೃಷ್ಟವಾಗಿರಲಿ ಇಷ್ಟಾರ್ಥಗಳೆಲ್ಲ ಕೂಡಿರಲಿ ಕೃಷ್ಣ ಕೃಷ್ಣ ಎಂಬಭೀಷ್ಟನಾಮದ ಅಷ್ಟಾಕ್ಷರಿ ಮಂತ್ರ ಜಪಿಸುವ ಹಾಗೆ || ಕನಸಿನೊಳಾಗಲಿ ಮನಸಿನೊಳಾಗಲಿ ಮನಸು ಕೆಟ್ಟಿರಲಿ ಮುನಿದಿರಲಿ ಜನಕಜಾಪತಿ ನಿನ್ನ ನಾಮದ ಸ್ಮರಣೆಯು ಮನಸಿನೊಳಗೆ ಒಮ್ಮೆ ನೆನೆಸುವ ಹಾಗೆ || ಸಂತತ ನಿನ್ನಯ ಸಾಸಿರನಾಮವೆನ್ನ ಅಂತರಂಗದೊಳಗಿರುತಿರಲಿ ಸಂತತ ವರದ ಶ್ರೀಪುರಂದರವಿಠಲ ಎ- ನ್ನಂತ್ಯಕಾಲದೊಳ್ ಒಮ್ಮೆ ನೆನೆಸುವ ಹಾಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು