ನಾರಾಯಣ ನಿನ್ನ ನಂಬಿದೆ
(ರಾಗಶಂಕರಾಭರಣ ಅಟ್ಟತಾಳ)
ನಾರಾಯಣ ನಿನ್ನ ನಂಬಿದೆ , ಲಕ್ಷ್ಮೀ-
ರಮಣ ನಿನ್ಹೊರತು ಪೊರೆವ ದೈವವೆಲ್ಲಿದೆ ||ಪ||
ನಾ ಮೀರಿ ದುಷ್ಕರ್ಮವ ಮಾಡಿದೆ
ಅಪಾರಮಹಿಮ ದಯಾನಿಧೇ ||ಅ.ಪ||
ನಾನಾ ಯೋನಿಗಳಿಂದ ಬಂದೆನೋ
ಮಾನ ತಾಳಲಾರದೆ ಬಲು ನೊಂದೆನೋ
ದೀನರಕ್ಷಕ ಎನ್ನ ಗತಿ ಮುಂದೇನೋ
ಮಾನದಿಂದಲಿ ರಕ್ಷಿಸುವಂಥ ದೊರೆ ನೀನೋ ||೧||
ದಾಸರ ಮನ ಉಲ್ಲಾಸನೆ
ಶ್ರೀಶ ಆಶ್ರಿತ ಜನರ ಪೋಷನೆ
ಸಾಸಿರ ಅನಂತ ಮಹಿಮನೆ
ಕ್ಲೇಶ ನಾಶಪಡಿಸೋ ಶ್ರೀನಿವಾಸನೆ ||೨||
ರಂಗನಗರ ಉತ್ತುಂಗನೆ
ಗಂಗಾಜನಕ ಗರುಡತುರಂಗನೆ ಉ-
ತ್ತುಂಗ ಗುಣಗಳಂತರಂಗನೆ ಅ-
ನಂಗನ ಪೆತ್ತ ರಂಗವಿಠಲನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments