ನಾರಾಯಣಾಯ ನಮೋ
(ರಾಗ ಮಾರವಿ ಝಂಪೆ ತಾಳ )
ನಾರಾಯಣಾಯ ನಮೋ
ನಾರಾಯಣಾಯ ನಮೋ
ನಾರಾಯಣಾಯ ನಮೋ ||ಪ||
ಹರಿಕೃಷ್ಣ ಶರಣೆನಲು ಅದು ನಿಮಗೆ ಲೇಸು
ಹರಿಯ ಕೀರ್ತನೆಗಳನು ಜಗದೊಳಗೆ ಸೂಸು
ಹರಿ ಭಕ್ತಿಯಿಲ್ಲದವರ ಸಂಗಕ್ಕೆ ಹೇಸು
ಹರಿಯ ಮರೆತರೆ ಮುಂದೆ ನರಕವೆ ಹಾಸು ||
ದುರ್ಜನರ ಮನೆಯಲಿಹ ಹಾಲ ಸವಿಗಿಂತ
ಸಜ್ಜನರ ಮನೆಯಲ್ಲಿ ನೀರೆ ಲೇಸೆಂದ
ದುರ್ಜನರ ಒಡನಾಟ ಸಂಸರ್ಗಗಿಂತ
ನಿರ್ಜೀವಿಯಾಗಿರುವ ಕಾಡೆ ಲೇಸೆಂದ ||
ಇಂದ್ರಿಯಂಗಳ ಸುಖವ ನೆಚ್ಚದಿರು ಕಂಡ್ಯ
ಇಂದ್ರಾದಿಗಳ ಬವಣೆಯನು ನೋಡಿಕೊಂಡ್ಯ
ಎಂದಿನಂತಲ್ಲ ದೇಹವ ಕಳೆವೆ ಕಂಡ್ಯ
ಹಿಂದು ಮುಂದಿನ ಗತಿಯ ತಿಳಿಯದವ ಭಂಡ ||
ಎಳೆತುಳಸಿ ವನಮಾಲೆ ಧರಿಸಿಕೊಳಬೇಕು
ತಿಲಕೋರ್ಧ್ವ ಪುಂಡ್ರಗಳನು ಹಚ್ಚಬೇಕು
ನಳಿನನಾಭನ ಸ್ಮರಣೆಯೊಳು ಮುಳುಗಬೇಕು
ಇಳೆಯೊಳಗೆ ವೈಕುಂಠವನು ಸಾರಬೇಕು ||
ಸಿರಿವರನ ಭಕ್ತರನು ಸೇವಿಸಲುಬೇಕು
ಪಿರಿದಾಗಿ ದಾನಧರ್ಮವಾಚರಿಸಬೇಕು
ಧರಣಿ ಪುಣ್ಯಸ್ಥಳವ ಮೆಟ್ಟುತಿರಬೇಕು
ಪುರಂದರವಿಠಲನ್ನ ಸತತ ನೆನೆಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments