ನಲಿದಾಡೆ ಎನ್ನ ನಾಲಿಗೆ ಮೇಲೆ
(ರಾಗ ಮುಖಾರಿ ಆದಿ ತಾಳ )
ನಲಿದಾಡೆ ಎನ್ನ ನಾಲಿಗೆ ಮೇಲೆ, ಸರಸ್ವತಿ ದೇವಿ
ಕುಣಿದಾಡೆ ಎನ್ನ ನಾಲಿಗೆ ಮೇಲೆ ||ಪ||
ಸಲಿಲಜೋದ್ಭವನ ವದನನಿಲಯಳೆ
ಇಳೆಯೊಳಪ್ರತಿಮ ಗುಣಗಣಾಂಬುಧಿ ತಾಯೆ ||ಅ.ಪ||
ಘಲು ಘಲು ಘಲು ಗೆಜ್ಜೆಯ ನಾದ
ಭಳಿಭಳಿರೆ ನಿಮ್ಮ ಹೊಳೆವ ಬೆರಳುಂಗುರ ಕಿಣಿ ಕಿಣಿ ನಾದ
ಎಳೆಯ ಮಾವಿನ ತಳಿರ ಪೋಲುವ ದಿವ್ಯ ಪಾದ
ಚೆಲ್ವ ಪೆಂಡೆಯ ಭೇದ
ನಲಿವ ಯುಗಳ ಜಂಘೆ
ಜಲಗುಳೆಯಂತೆ ಜಾನು
ಥಳಥಳಿಸುವ ತೊಡೆ ಒಲಿವ ಸುಗುಣಿಯೆ ||
ದಿನಕರಕೋಟಿತೇಜದಿ ಹೊಳೆವ
ಅನುಪಮವಾದ ಕನಕ ವಸನದಿಂದ ಎಸೆವ
ಘನವಾದ ಜಘನ ಗಗನದಂದದಿ ಸುಂದರ ಕಟಿಯಲಿ ಮೆರೆವ
ಮಣಿಧಾಮ ವಿಭವ
ತನು ಜಠರವು ಜಾಹ್ನವಿ ಸುಳಿನಾಭಿಯು ಘನ
ಸ್ತನಯುಗಳ ಚಂದನಲೇಪಿತಳೆ ||
ದುಂಡು ಮುತ್ತಿನ ಕೊರಳ ಹಾರ
ಮಿಣೀ ಮಿಣಿಸುವ ಉ-
ದ್ದಂಡ ಮನೋಹರ ಹೊನ್ನಿನ ಸರ
ಕರಿರಾಜ ಪೋತನ
ಸೊಂಡಿಲಿನಂತೆ ಭುಜದ ಭಾರ
ನಡೆವ ಒಯ್ಯಾರ
ಮಂಡಿತ ವಾದ
ಕಂಕಣ ತೋಳಬಳೆಗಳು
ದುಂಡು ಹವಳ ಕೈ ಕಟ್ಟುಳ್ಳವಳೆ ||
ನಸುನಗುಮುಖವು ನಾಸಾಭರಣ
ಎಸೆವ ಕಪೋಲ
ಹೊಸ ಕುಂಡಲ ಚಳತೊಂಬುಳ್ಳ ಶ್ರವಣ
ಬಿಸಜದಳದಂತೆ
ಲಸಿತ ಕರ್ಣಾಂತವಾದ ನಯನ
ತಿಲಕದ ಹಸನ
ಶಶಿಸೂರ್ಯರ ಆಭರಣ ಸುಶೋಭಿತೆ
ಕುಸುಮ ಮುಡಿದ ಮೂರ್ಧಜವುಳ್ಳವಳೆ
ಶೃಂಗಾರವಾದ ಜಡೆ ಭಂಗಾರ
ಹೊಂಗ್ಯಾದಿಗೆ ಮುಡಿದ
ಭಂಗಾರದ ಹೆರಳಿನ ರಾಕಟಿ ವರ-
ಭೃಂಗದ ಸ್ವರ ಹಿಂಗದೆ ಭಕ್ತರ ಸಲಹುವ ಭಾರ
ಕಂಗಳ ಮನೋಹರ ರಂಗ ಪುರಂದರವಿಠಲ ರಾಯನ
ಮಂಗಳ ಮೂರ್ತಿಯ ತೋರೆ ಶುಭಾಂಗಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments