ನಗುವರಲ್ಲೊ ರಂಗಯ್ಯ
(ರಾಗ ಹಿಂದುಸ್ತಾನಿಕಾಪಿ ಆದಿ ತಾಳ )
ನಗುವರೆಲ್ಲ ರಂಗಯ್ಯ ನಿನ್ನಾಟವ ಕಂಡು ||ಪ ||
ಹಗರಣವಾಗಿದೆ ಎನಗೆ ನಿಗಮಗೋಚರನೆ ||ಅ||
ನಿಗಮವನ್ನು ತರಲು ಮತ್ಸ್ಯಾಕೃತಿಯ ತಾಳಿದೆ
ನಗವನೆತ್ತಿ ಕೂರ್ಮನೆಂಬ ಹೆಸರ ಧರಿಸಿದೆ
ಜಗತಿಯನ್ನು ತರಲು ವರಾಹ ಮೂರ್ತಿಯೆನಿಸಿದೆ
ಮಗುವಿಗಾಗಿ ಘೋರಾಕೃತಿ ನರಮೃಗನೆನಿಸಿದೆ ||
ಹೆಡಮುಡಿ ಕಟ್ಟಿ ದಾನವ ಕೊಟ್ಟ ಬಲಿಯ ಭಂಗಿಸಿದೆ
ಪಡೆದ ತಾತ ಶಿರವ ಕಡಿದು ನ್ಯಾಯವೆನಿಸಿದೆ
ಮಡದಿಗಾಗಿ ಮರ್ಕಟರ ಹಿಂಡು ಕೂಡಿಸಿದೆ
ಕಡಲ ಕಟ್ಟಿ ಕಪಿಗಳಿಂಡ ಧುರವ ಜಯಿಸಿದೆ ||
ಅಷ್ಟಮಿಯೊಳರ್ಧ ರಾತ್ರಿಯಲ್ಲಿ ಜನಿಸಿದೆ
ದುಷ್ಟ ಕಂಸನು ಹಾಕಿದ ಬಾಗಿಲ ತೆಗೆಸಿದೆ
ತಟ್ಟನೆ ಗೋಕುಲದಲ್ಲಿ ಬಂದು ನೆಲಸಿದೆ
ಸೃಷ್ಟಿಸಿ ಚಂಡಿಕೆಯ ಖಳನ ಮುಂದೆ ನಿಲಿಸಿದೆ ||
ನಂದಗೋಪ ತನಗೆ ಕಂದನಾದನು ಎಂದು
ಮಿಂದು ಕಾಳೀಂದಿಯೊಳು ಮಂದಿರಕೆ ಬಂದು
ಚಂದದಿಂದ ಜಾತಕರ್ಮ ಮಾಡಿಸಿಕೊಂಡು
ಬಂದ ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟನು ಅಂದು ||
ಬಣ್ಣಿಸಿ ಮಕ್ಕಳ ಕರೆದು ಬೆಣ್ಣೆಯುಣಿಸಿದೆ
ಚಿಣ್ಣಿಕೋಲು ಚೆಂಡು ಬುಗರಿ ಗಜ್ಜುಗವಾಡಿದೆ
ಕಣ್ಣು ಸನ್ನೆ ಮಾಡಿ ಅವರ ಕಾಕು ಮಾಡಿದೆ
ಮಣ್ಣು ತಿಂದ ಬಾಯೊಳು ಬ್ರಹ್ಮಾಂಡ ತೋರಿದೆ ||
ಗೊಲ್ಲರ ಮನೆಗೆ ನೀನು ಮೆಲ್ಲನೆ ಪೋಗಿ
ಚೆಲ್ಲಿ ಪಾಲು ಮೊಸರು ಬೆಣ್ಣೆ ಸೂರೆ ಮಾಡಿದೆ
ವಲ್ಲಭಯರ ಕೂಡೆ ನೀನು ಸರಸವಾಡಿದೆ
ಮುಲ್ಲೆ ಮಲ್ಲಿಗೆಯೆ ಅರಳ ಮುಡಿಗೆ ಮುಡಿಸಿದೆ ||
ಬಾಲಕರ ಕೂಡೆ ಮೊಸರ ಭಾಂಡ ಒಡೆಸಿದೆ
ಹಾಲು ಮೊಸರು ಬೆಣ್ಣೆ ಕದ್ದು ಕಳ್ಳನೆನಿಸಿದೆ
ಬಾಲೆಯರ ವಸ್ತ್ರವ ಕೊಂಡು ಮರವನೇರಿದೆ
ಕಾಲಾಹಿವೇಣಿಯರೊಡಗೂಡಿ ರಮಿಸಿದೆ ||
ತುರುಗಳ ಹಿಂಡನು ನಡೆಸಿ ವನವ ಚರಿಸಿದೆ
ಮೊರಡು ಮುದುಕಿ ಕುಬುಜೆಯನ್ನಾದರದಿ ಕೂಡಿದೆ
ಕರುಣವಿಷ್ಟಿಲ್ಲದೆ ಸೋದರಮಾವನ ಕೆಡಹಿದೆ
ನರನ ರಥಕೆ ಬೋವನಾಗಿ ಕುದುರೆ ನಡೆಸಿದೆ ||
ತರುಣಿಯರ ವ್ರತವ ಕೆಡಿಸಿ ಬತ್ತಲೆ ನಿಲಿಸಿದೆ
ತುರಗವೇರಿ ಕಲ್ಕಿಯಾಗಿ ಖಡ್ಗವ ಧರಿಸಿದೆ
ಗುರು ಮಧ್ವರಾಯರಿಗೊಲಿದು ಉಡುಪಿಲಿ ನೆಲಸಿದೆ
ವರದ ಪುರಂದರವಿಟ್ಠಲನೆ ನಮಗೆ ಗತಿಯಾದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments