ನಂದನ ಕಂದನ ಇಂದುವದನನ

ನಂದನ ಕಂದನ ಇಂದುವದನನ

(ರಾಗ ಕಾಪಿ ಅಟತಾಳ ) ನಂದನ ಕಂದನ ಇಂದುವದನನ ಎಂದು ಬಿಗಿದಪ್ಪಿ ಮುದ್ದಿಡುವೆ ನಾ ||ಪ || ಉಂಗುರ ಕೇಶಗಳು ಶಿರದ ಮೇಲ್ಕಟ್ಟು ರಂಗಯ್ಯನ ಫಣೆಯಲಿ ಕಸ್ತೂರಿ ಬೊಟ್ಟು ||ಅ || ಝಳಝಳಿರೆನ್ನುತ ಕರ್ಣ ಕುಂಡಲವು ಥಳಥಳಿಸುವ ದಿವ್ಯ ಪಚ್ಚೆ ಪದಕವು || ಆಜಾನುಬಾಹು ಅಜನ ಪೆತ್ತ ನಾಭಿ ವಿಜಯಗೆ ಸಾರಥ್ಯ ಮಾಡಿದ ಕೈ || ಚಿನ್ನದ ಕಾಪು ಕೈಲಿ ಒಪ್ಪುವದು ಸಣ್ಣ ರಂಗನ ಕರದಿ ಬುಗುರಿ ಇರುವುದು || ಪಟ್ಟೆ ಪೀತಾಂಬರ ಉಡಿಯಲಿ ಪೊಳೆಯೆ ಕಟ್ಟಿದ ತೋಳಬಂದಿ ಕೊರಳೊಳು ಸರಿಗೆ || ಮುತ್ತಿನ ಹಾರ ಶ್ರೀ ತುಳಸೀಸರ ಮತ್ತೆ ನಲಿದಾಡುವ ಅತಿ ವಿಚಿತ್ರ || ಭಂಗಾರ ಕಾಲ್ಸರ ಅಂಗಾಲು ಬಣ್ಣ ಮಂಗಳವಿಗ್ರಹಕೆ ಮಣಿವ ಮುಕ್ಕಣ್ಣ || ಕರುಣಾಸಾಗರನು ಏನೆಂಬೆ ನಾನು ಅರಮನೆಯಲಿ ಆಡುವ ಸಣ್ಣ ಕೃಷ್ಣಯ್ಯನು || ಸಾರು ಅನ್ನಕ್ಕೆ ನೀಡಿದ ಕೈಯಿ ನೀರುಮಜ್ಜಿಗೆ ಉಂಡ ಪವಳದ ಬಾಯಿ || ಮಲಗಿದ ಮಂಚದ ಮೇಲೋಡಿ ಬಂದು ಮಲಗಿ ನಿದ್ರೆಗೆಯ್ದ ಬೆರಳನೆ ಸವಿದು || ಎಂದು ಇರುವವನು ನಂಬಿದರೆ ಬಿಡನು ತಂದೆ ಪುರಂದರವಿಠಲರಾಯನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು