ಧರ್ಮಶ್ರವಣವಿದೇತಕೇ ಮೂರ್ಖಗೆ

ಧರ್ಮಶ್ರವಣವಿದೇತಕೇ ಮೂರ್ಖಗೆ

( ರಾಗ ದುರ್ಗಾ. ಆದಿ ತಾಳ)

 

ಧರ್ಮಶ್ರವಣವಿದೇತಕೇ ಮೂರ್ಖಗೆ

ಧರ್ಮಶ್ರವಣವಿದೇತಕೇ ||ಪ||

ಕರ್ಮಾನುಷ್ಠಾನವನೆಸಗದಿರುವ

ದುರ್ಮತಿಗೇತಕೆ ಬ್ರಾಹ್ಮಣ ಜನ್ಮ ||ಅ||

 

ಕೋಣಗೆ ವೀಣಾಗಾನವಿದೇತಕೆ

ಮಾಣಿಕ್ಯವೇತಕೆ ಮರ್ಕಟಗೆ

ತ್ರಾಣವು ತೊಲಗಿದ ಹೆಣ್ಣಿಗಿದೇತಕೆ ಕ-

ಟ್ಟಾಣಿ ಮುತ್ತಿನ ಹಾರವು ಕೊರಳಿಗೆ ||

 

ಷಡುರಸ ಅನ್ನವಿದೇತಕೆ ಗರ್ದಭ

ಉಡುಗೊರೆ ಸಹಿತಲೆ ಶ್ವಾನನಿಗೆ

ಕಡು ವೃದ್ಧಗೆ ಮೈನೆರೆದ ಹೆಣ್ಣಿನ

ಒಡನೆ ಭೋಗಿಪೆನೆಂಬಭಿಲಾಷೆಯೇಕೆ ||

 

ಹುಟ್ಟು ಕುರುಡಗೆ ದೀಪವಿದೇತಕೆ

ಭ್ರಷ್ಟನಿಗೇತಕೆ ಕುಲ ಧರ್ಮ

ಸೃಷ್ಟಿಯೊಳಧಮಗೆ ಪುರಂದರವಿಠಲನ

ಮುಟ್ಟಿ ಭಜಿಪೆನೆಂಬ ಅಭಿಲಾಷೆಯೇತಕೆ ||

ದಾಸ ಸಾಹಿತ್ಯ ಪ್ರಕಾರ
ಬರೆದವರು