ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋ

ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋ

( ಆನಂದಭೈರವಿ ಆದಿತಾಳ) ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋ ಸೃಷ್ಟಿಯ ನಾರಿಯರೆಲ್ಲ ಕಣ್ಣಿಟ್ಟು ಹೀರುವರೋ ನಿನ್ನ ||ಪ|| ಪುಟ್ಟ ಪದಕಮಲದಿ ಮೆಟ್ಟಿ ರತುನ ಪಾದುಕಾ ಇಟ್ಟ ಕಿರುಗೆಜ್ಜೆ ಪೆಂಡ್ಯೆ ದಿಟ್ಟತನದಿ ಘಟ್ಟಿ ಸಾಸಿರ ಬಾಳುವ ಪಟ್ಟೆಯನೆ ಬಿಗಿ - ದುಟ್ಟು ಮೇಗಿಲ್ಲದೆ ಬೆಲೆಯಾದ ಪಟ್ಟದುಡುದಾರವಿಟ್ಟು ||೧|| ಸಿರಿಯಿರುವ ಉರದಲ್ಲಿ ಪರಿಮಳ ಗಂಧವ ಪೂಸಿ ಪರಿಪರಿ ಪದಕ ಮುತ್ತು ಸರ ವೈಜಯಂತಿ ಕೊರಳ ಕೌಸ್ತುಭ ಕಾಂತಿ ನಿರುಪಮ ಶ್ರೀವತ್ಸಲಾಂಛನ ಸರಿಗೆ ತಾಳಿ ಪದಕವು ಸೇರಿದ ಮುತ್ತ್ತಿನ ಜಲ್ಲೆ ||೨|| ಉಗುರ ಗೋರಂಟಿ ಛಾಯಾ ಚಿಗುರು ಪೋಲುವ ಬೆರಳು ಬಗೆಬಗೆ ರತುನಂಗಳ ನಗಗಳನಿಟ್ಟು ನಗವನೆತ್ತಿದ ಭುಜಕೆ ಬಿಗಿದ ಬಾಹುಪುರಿ ಕೆಂಪು ನಿಗಿನಿಗಿಗುಟ್ಟುವ ಕಾಂತಿ ನಗುತಿದೆ ಬಾಲ ಭಾನುವ ||೩|| ಎಳೆಮಾವಿನ ಸೊಬಗಿನ ತಳಿರುಪೋಲುವ ಕೆಂದುಟಿ ಸುಳಿಪಲ್ಲು ಮಂದಹಾಸವು ನಳಿನಳಿದಾಕ್ಷ ಥಳಥಳಿಪ ಕುಂಡಲವು ಪೊಳೆವ ನಾಸಿಕಲಲಾಟ ಚೆಲುವ ಹುಬ್ಬು ಕಸ್ತೂರಿಯ ತಿಲಕ ಒಪ್ಪುವ ಮುಖದಿ ||೪|| ಕೋಟಿಹೊನ್ನು ಬಾಳುವ ಕಿರೀಟವಿಟ್ಟು ಕಡೆಗಣ್ಣ ನೋಟದಿಂದ ತರುಣೇರ ವೋಟಿ ಮಾಡುತ ಚಾಟುಮಾತುಗಳಾಡುತ ಪೊಟ್ಟನಂತೆ ತಿರುಗಿದರೆ ನೀಟಲ್ಲವೊ ನಿನಗಿದು ಪಾಟಲಾಧರನೆ ಕೇಳು ||೫|| ಬಿಂಕದಿಂದ ಎರಡು ಕರದಿ ಶಂಖ ಚಕ್ರವ ಪಿಡಿದು ಅಂಕಿತ ವೇಣುನೂದುತ ಶಂಕೆ ಇಲ್ಲದೆ ಮಂಕು ಮಾಡುತ ಬಾಲೇರ ಪಂಕಜಾಕ್ಷ ಸುಳಿದರೆ ಮಂಕುಗಾರನೆಂದು ನಿನ್ನ ಅಂಕಿತ ಮಾಡುವರಲ್ಲೋ ||೬|| ಮಂಗಳಮೂರುತಿ ಮುಂಚೆ ಶೃಂಗಾರಗಳನೆ ಮಾಡಿ ಪೊಂಗೊಳಲನೂದುತ ಶ್ರೀರಂಗ ಸುಳಿದರೆ ಹೆಂಗಳ ರಂಭೇರೊಂದಾಗಿ ಕಂಗಳಿಡಲು ಉನ್ನಂತ ರಂಗವಿಠಲಗಲದಿರೋ ಹಿಂಗದೆ ನರಸಿಂಗನೇ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು