ದಾಸರಾಯ ಪುರಂದರದಾಸರಾಯ
-----ರಾಗ-ಸಾವೇರಿ(ಭೈರವಿ) ಅಟತಾಳ (ದೀಪಚಂದಿ)
ದಾಸರಾಯ ಪುರಂದರದಾಸರಾಯ ||ಪ||
ದಾಸರಾಯ ಪ್ರತಿದಾಸರದಲಿ ಶ್ರೀನಿ-
ವಾಸನ ತೋರೊ ದಯಾಸಾಂದ್ರ ಪುರಂದರ ||ಅ.ಪ||
ವರದನಾಮಕ ಭೂಮಿಸುರನ ಮಡದಿ ಬ-
ಸುರಲಿ ಜನಿಸಿ ಬಂದು ಮೆರೆದೆ ಧರಣಿಯೊಳು ||೧||
ಕುಲಿಶಧರಾಹ್ವಯ ಪೊಳಲೊಳು ಮಡದಿ ಮ-
ಕ್ಕಳ ಕೂಡೆ ಸುಖದಿ ಕೆಲವು ಕಾಲದೊಳಿದ್ಯೊ ||೨||
ವ್ಯಾಸರಾಯರಲಿ ಭಾಸುರ ಮಂತ್ರೋಪ-
ದೇಶವ ಕೊಂಡು ರಮೇಶನ ಭಜಿಸಿದೆ ||೩||
ಮನೆ ಧನ ಧಾನ್ಯ ವಾಹನ ವಸ್ತುಗಳೆಲ್ಲ
ತೃಣಕೆ ಬಗೆದು ಕೃಷ್ಣಾರ್ಪಣವೆಂದೆ ಬುಧರಿಗೆ ||೪||
ಪ್ರಾಕೃತಭಾಷೆಯೋಳ್ ನೀ ಕೃತಿ ಪೇಳಿ ಆ
ಪ್ರಾಕೃತಹರಿಯಿಂದೆ ಸ್ವೀಕೃತನಾದೆ ||೫||
ತೀರ್ಥಕ್ಷೇತ್ರಗಳ ಮೂರ್ತಿ ಮಹಿಮೆಗಳ
ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ ||೬||
ಪಾತಕ ವನನಿಧಿ ಪೋತನೆನಿಪ ಜಗ-
ನ್ನಾಥವಿಠಲನ ಪ್ರೀತಿಯಿಂದೊಲಿಸಿದೆ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments