ತೆರಳಿದರು ಹರಿಪುರಕಿಂದು

ತೆರಳಿದರು ಹರಿಪುರಕಿಂದು

ತೆರಳಿದರು ಹರಿಪುರಕಿಂದು || ಪಲ್ಲವಿ || ಪುರಂದರದಾಸರಾಯರು ದೀನಬಂಧು || ಅನುಪಲ್ಲವಿ || ರಕ್ತಾಕ್ಷಿವತ್ಸರ ಪುಷ್ಯಾಂತ ರವಿವಾರ ಮುಕ್ತಿಗೈದಿದರು ಕೇಳಿ ಬುಧಜನರು || ೧ || ವಿರೂಪಾಕ್ಷ ಕ್ಷೇತ್ರದಿ ವಿಠಲನ್ನ ಸನ್ನಿಧಿಯಲ್ಲಿ ಶರೀರವನಿರಿಸಿ ಅನಾಥರನು ಹರಿಸಿ || ೨ || ಎತ್ತುವರಾರತಿ ಪುಷ್ಪಕವೇರಿಸಿ ಸತ್ತಿಗೆ ಪಿಡಿಯೇ ದುಂದುಭಿಗಳು || ೩ || ಆ ಮಹಾವೈಕುಂಠನೈದುವರಿಗೆ ಹರಿ ನಾಮದ ಸೋಪಾನ ದಯದಿಂದ ತೋರಿ || ೪ || ವರವೇದತುಲ್ಯ ಪದಗಳ ಸಂಖ್ಯೆಯ ಮಾಡಿ ಗುರು ಮಧ್ವಪತಿವಿಠಲನ್ನ ಸ್ಮರಿಸುತಲಿ || ೫ || ~~~ * ~~~ [ ಈ ಪದಗಳನ್ನು ರಚಿಸಿರುವ ಗುರುಮಧ್ವಪತಿವಿಠಲಾಂಕಿತದ ದಾಸರು ಪುರಂದರದಾಸರ ಮಕ್ಕಳೆಂದೇ ಪ್ರತೀತಿ. ಕಮಲಾಪುರದ ತಾಮ್ರಶಾಸನದಲ್ಲಿ ಮಧ್ವಪದಾಸರೆಂಬ ’ಶ್ರೀಪುರಂದರದಾಸಜ’ರ ಹೆಸರಿದೆ. ಆದರೆ ಈ ಪದವನ್ನು ರಚಿಸಿದವರು ಅವರೇ ಎಂಬುದು ಸಂದೇಹ.] ಹರಿಪುರಕೆ - ವೈಕುಂಠಕ್ಕೆ. ವಿವರಗಳಿಗೆ ನೋಡಿ, ವಾದಿರಾಜರ ’ವೈಕುಂಠವರ್ಣನೆ’ ವಿರೂಪಾಕ್ಷ ಕ್ಷೇತ್ರದಿ - ಹಂಪೆಯಲ್ಲಿ ; ವಿಜಯ ವಿಠ್ಠಲನ ಗುಡಿಯಲ್ಲಿ. ಹರಿನಾಮದ ಸೋಪಾನ... - ಹರಿಯ ಪ್ರಸಾದಕ್ಕೆ ನಾಮಸ್ಮರಣೆ ಒಂದೇ ಸಾಕೆಂಬ ತತ್ವವನ್ನು ಜನರಿಗೆ ಹೇಳಿ. ವರವೇದತುಲ್ಯಪದಗಳ... - ಉಪನಿಷತ್ತುಗಳಿಗೆ ಸಮಾನವಾದ. ವ್ಯಾಸತೀರ್ಥರು ಪುರಂದರದಾಸರ ರಚನೆಗಳನ್ನು ಪುರಂದರೋಪನಿಷತ್ತೆಂದು ಬಣ್ಣಿಸಿದರು. [ಪುರಂದರ ಸಾಹಿತ್ಯ ದರ್ಶನ - ಭಾಗ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು