ತುಂಗೆ ಮಂಗಳತರಂಗೆ
( ರಾಗ ಭೂಪಾಳಿ ಝಂಪೆ ತಾಳ)
ತುಂಗೆ ಮಂಗಳತರಂಗೆ ||ಪ||
ಹರಿಯ ಸರ್ವಾಂಗೆ ಜಯ ಜಯತು ಜಯ ತುಂಗಭದ್ರೆ ||ಅ||
ಆದಿಯೊಲ್ಲೊಬ್ಬ ದೈತ್ಯ ಮೇದಿನಿಯ ಕದ್ದೊಯ್ದು
ಸಾಧಿಸುತ್ತಿರಲವನ ಬೆನ್ನಟ್ಟಿ ಬಿಡದೆ
ಛೇದಿಸುತಲವನ ಭೂಮಿಯನೆತ್ತಿ ಕಾಯ್ದಂಥ
ಆದಿ ವರಾಹನ ದಾಡೆಗಳಿಂದ ಬಂದೆ ||
ಜಲವೆಲ್ಲ ಹರಿಮಯ ಶಿಲೆಯೆಲ್ಲ ಶಿವಮಯ
ಮಳಲು ಮಿಟ್ಟೆಗಳೆಲ್ಲ ಮಣಿಯ ಮಯವು
ಬೆಳದಿಪ್ಪ ದರ್ಭೆಗಳು ಸಾಕ್ಷಾತ್ತು ಬ್ರಹ್ಮಮಯ
ನಳಿನನಾಳವು ಸರ್ವ ವಿಷ್ಣುಮಯವು ||
ಇದೇ ವೃಂದಾವನ ಇದೇ ಕ್ಷೀರಾಂಬುಧಿ
ಇದೇ ವೈಕುಂಠಕೆ ಸರಿಯೆಂದೆನಿಸಿದೆ
ಇದೇ ಬದರಿಕಾಶ್ರಮ ಇದೇ ವಾರಣಾಸಿಗೆ
ಅಧಿಕ ಫಲವನ್ನೀವ ದೇವಿ ||
ಧರೆಗೆ ದಕ್ಷಿಣ ವಾರಣಾಸಿಯೆಂದೆನಿಸಿದೆ
ಪರಮ ಪವಿತ್ರೆ ಪಾವನಚರಿತೆ ನಿನ್ನ
ಸ್ಮರಣೆ ಮಾತ್ರದಿ ಕೋಟಿ ಜನ್ಮದಘವನು ಕಳೆವ
ಪರಿದು ಸಾಯುಜ್ಯಫಲವೀವ ದೇವಿ ||
ಪರಮಭಕ್ತ ಪ್ರಹ್ಲಾದಗೊಲಿದು ಬಂದು
ನರಸಿಂಹ ಕ್ಷೇತ್ರವೆಂದೆನಿಸಿ ಮೆರೆದೆ
ಧರೆಯೊಳಧಿಕ ವರ ಕೂಡಲೀಪುರದಲ್ಲಿ
ವರದಪುರಂದರವಿಟ್ಠಲನಿರಲು ಬಂದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments