ತಂಗಿಗ್ಹೇಳಿದ ಕೃಷ್ಣ ಚಂದದಲಿ ಬುದ್ಧಿ

ತಂಗಿಗ್ಹೇಳಿದ ಕೃಷ್ಣ ಚಂದದಲಿ ಬುದ್ಧಿ

( ರಾಗ ಕಾಂಭೋಜಿ ಝಂಪೆ ತಾಳ) ತಂಗಿಗ್ಹೇಳಿದ ಕೃಷ್ಣ ಚಂದದಲಿ ಬುದ್ಧಿ ||ಪ|| ಅತ್ತೆಯ ಮನೆಯಲ್ಲಿ ಇರುವಂಥ ಸುದ್ದಿ ||ಅ|| ಯಾರೇನು ಅಂದರು ಮೋರೆಯನು ತಿರುವದಿರು ಮೋರೆ ಮೇಲೆ ಕೈಯೆತ್ತಿ ಬಲ್ಲಳೆಂದೆಣಿಸಿ ವಾರಿಗೇವರ ಕೂಡಿ ನೀರನ್ನು ತರುವಾಗ ವಾರೆಗಣ್ಣಿಲಿ ನೋಟ ನೋಡದಿರು ಕಂಡ್ಯ || ಪರರ ಒಡವೆಯ ಕಂಡು ದುರುಳ ಮಾತಾಡದಿರು ನೆರೆಹೊರೆಯರಿಗೆ ನೀನು ತಲೆವಾಗಿ ನಡೆಯೆ ಪರರ ಮಾತುಗಳಿಂದ ದುರುಳಳೆಂದು ಎಣಿಸಬೇಡ ನೆರೆಹೊರೆಯರ ಕಂಡು ನೀ ಬದುಕು ಮಾಡಮ್ಮ || ಭಂಗಾರದ ಪೇಟೆಯೊಳು ಅಂಗಡಿಗೆ ಹೋಗದಿರು ಅಂಗನೇರಿಗೆ ಮಾನಭಂಗಾಗಿ ನಡೆಯೆ ಅಂಗನೇರಿಗೆ ನಿನ್ನಂತರಂಗವ ಹೇಳದಿರು ಭಂಗಾರವಸ್ತ್ರಗಳು ಮುಚ್ಚಿಕೊಳ್ಳಮ್ಮ || ಹಾಕಿದ್ದು ನೀನುಂಡು ಬೇಕೆಂದು ಬೇಡದಿರು ಸಾಕು ಸಾಕು ಎಂಬ ನಾಚಿಕೆಯ ಹಿಡಿಯೆ ನಾಕುಮಂದಿಯರೊಡನೆ ಕೋಕೆ ಮಾತಾಡದಿರು ಲೋಕದೊಳಿವಳೊಬ್ಬ ಮೂಗಿಯೆಂದೆನಿಸೆ || ಇಷ್ಟರು ಅಂದರು ನಿಷ್ಠೂರವಾಡದಿರು ಘಟ್ಟಿ ಮಾಡಮ್ಮ ನಿನ್ನ ಮನಸು ಸೃಷ್ಟಿಯೊಳಗೆ ನಮ್ಮ ಪುರಂದರ ವಿಠಲನ್ನ ಶ್ರೇಷ್ಠನಾದ ಕೃಷ್ಣನ್ನ ತಂಗಿಯೆಂದೆನಿಸೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು