ಜಯ ಮಂಗಳಂ ನಿತ್ಯ ಶುಭ ಮಂಗಳಂ
( ರಾಗ ಭೈರವಿ ಅಟತಾಳ)
ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||
ದುರುಳ ತಮವನು ಕದ್ದು ಪಾತಾಳದಲಿ
ಇರಲವನ ಕೊಂದು ವೇದಾವಳಿಗಳ
ಸರಸಿಜೋದ್ಭವಗಿತ್ತು ಸುರಮುನಿಗಳನೆಲ್ಲ
ಪೊರೆವ ಶ್ರೀ ಮಚ್ಛಾವತಾರ ಹರಿಗೆ ||
ಸುರರು ದೈತ್ಯರು ಕೂಡಿ ಸಿಂಧುವನು ಮಥಿಸುತಿರೆ
ಗಿರಿ ಮುಣುಗಿ ಪಾತಾಳಕೆ ಪೋಗೆ
ಭರದಿಂದಲಿ ಬಂದು ಗಿರಿಯ ಬೆನ್ನಿಲ್ಹೊತ್ತು
ಸುರರ ರಕ್ಷಿಸಿದ ಶ್ರೀ ಕೂರ್ಮ ಹರಿಗೆ ||
ಭೂಮಿಯನು ಹಿರಣ್ಯಾಕ್ಷನೆಂಬೊ ದೈತ್ಯನು ಸುತ್ತಿ
ಭೀಮವಿಕ್ರಮನು ಪಾತಾಳಕೊಯ್ಯೆ
ತಾಮರಸಸಂಭವನು ಬಿನ್ನವಿಸಲವನ ಕೊಂದು
ಭೂಮಿಯನು ತಂದ ಶ್ರೀವರಹ ಹರಿಗೆ ||
ಪರಮಭಾಗವತ ಪ್ರಹ್ಲಾದನ ಹಿರಣ್ಯಕನು
ಪರಿಪರಿಯ ಬಾಧೆಯಿಂದಲಿ ಪೀಡಿಸೆ
ಕರುಣಾಳು ಕೋಪದಲಿ ದೈತ್ಯನುದರವ ಬಗಿದ
ಶರಣರಕ್ಷಕನಾದ ನರಸಿಂಹಗೆ ||
ಬಲಿಚಕ್ರವರ್ತಿ ಭೂಮಿಯ ಧಾರೆಯೆರೆಯಲು
ಇಳೆಯನಳೆದವನ ಸುತಳಕಿಳುಹಿದೆ
ಸಿಲುಕಿ ಭಕುತಿಗೆ ಮೆಚ್ಚಿ ಬಾಗಿಲ ಕಾಯಿದೆ
ಬಲವಂತ ವಾಮನಾವತಾರಹರಿಗೆ ||
ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದ
ಕೀರ್ತಿಯನು ಲೋಕದೊಳು ವಿಸ್ತರಿಸಿದೆ
ಪಾರ್ಥಿವಾಂತಕ ಬಾಹುಬಲ ಪರಿಪೂರ್ಣನೆ
ಆರ್ತಬಾಂಧವ ಭಾರ್ಗವರಾಮಗೆ ||
ದಶರಥನ ಮನೆಯಲುದ್ಭವಿಸಿ ರಾವಣಾಸುರನ
ದಶಶಿರವನೀಡಾಡಿ ಅವನನುಜಗೆ
ವಸುಧಾಧಿಪತ್ಯವನು ಲಂಕೆಯೊಳಗಿತ್ತ
ಅಸಮವಿಕ್ರಮ ರಾಮಚಂದ್ರಹರಿಗೆ ||
ಯದುಕುಲದಲಿ ಬಂದು, ಕೊಂದು ಕಂಸನನಂದು
ಮುದದಿ ಪಾಂಡವರನು ಉದ್ಧರಿಸಿದೆ
ಒದಗಿ ಕೌರವಬಲವ ಸಂಹರಿಸಿ ಪದವಿತ್ತು
ಮುದದಿ ಮನ್ನಿಸಿದ ಶ್ರೀಕೃಷ್ಣ ಹರಿಗೆ ||
ತ್ರಿಪುರದಮರಾರಿಯರ ಸತಿಯರ ಪತಿವ್ರತವ-
ನಪಹರಿಸಿ ದಿವ್ಯ ಮೋಹರೂಪದಿ
ತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತ
ಅಪರಿಮಿತ ಬುದ್ಧಾವತಾರ ಹರಿಗೆ ||
ಕಲಿಯುಗದ ಕಡೆಯಲ್ಲಿ ಖಳನೃಪರನೆಲ್ಲವನು
ತುಳಿಸಿ ಕುದುರೆಯ ಖುರದಪುಟಗಳಿಂದ
ಸುಲಭದಿಂ ನಡೆಸುತ ಕೃತಯುಗದ ಧರ್ಮವನು
ಬಲ್ಲಂಥ ಕಲ್ಕ್ಯಾವತಾರ ಹರಿಗೆ ||
ಮಂಗಳ ಪದಂಗಳನು ಭಕುತಿಯಿಂದಲಿ ಮೋಹನತ-
ರಂಗನೇರೆಲ್ಲ ರಾಗದಿ ಪಾಡಲು
ಮಂಗಳಾತ್ಮಕ ಸಿರಿಪುರಂದರವಿಠಲಗೆ
ಅಂಗನೇರೆಲ್ಲ ಆರತಿಯೆತ್ತಿರೇ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments