ಜಯ ಜಯ ಶ್ರೀರಾಮ ನಮೋ
(ರಾಗ ಭೈರವಿ ಆದಿತಾಳ)
ಜಯ ಜಯ ಶ್ರೀರಾಮ ನಮೋ
ಜಯ ಜಯ ಶ್ರೀ ಕೃಷ್ಣ ನಮೋ ||ಪ||
ಸಿರಿಯರಸನು ಶೃಂಗಾರವ ಮಾಡಿ
ಶ್ರೀ ಗಂಧವನೆ ಹಣೆಗಿಟ್ಟು
ತರುಣ ತುಲಸಿ ಮಾಲೆಯ ಧರಿಸಿ
ಕರುತುರುಗಾಯಲು ಹೊರಗೆ ಹೊರಟನು ||ಅ||
ಹೊತ್ತು ಹೋಯಿತು ತುರು ಬಿಡಿರೆನ್ನುತ
ಅಚ್ಯುತ ನುಡಿದ ಗೋಪಿಯರೊಡನೆ
ತುತ್ತುರಿ ನಾದವು ತುರುರೆನ್ನುತ
ಒತ್ತಿ ಸ್ವರದಿ ಪೊಂಗೊಳಲನೂದಲು ||
ಹರಿಸ್ವರವೆನ್ನುತ ಒಬ್ಬಳು ಪೋಗಿ
ನೆರೆಮನೆಗ್ಹೋಗಿ ತಾ ಕೇಳಿದಳು
ಒರಳ ಕೊಟ್ಟೀರಾ ಪರಮಾನ್ನ ಮಾಡಿ
ತ್ವರದಿ ಮರಳಿ ತಂದಿಪ್ಪೆನೆನುತಲಿ ||
ವನಿತೆ ಸೌಟಿನೊಳಕ್ಕಿಯ ತೊಳೆಸಿ
ಒನಕೇಲಿ ಓಗರ ಹದ ನೋಡಿ
ಘನತರ ಸೀರೆ ತಲೆಗೆ ಸುತ್ತಿಕೊಂಡು
ತನುವಿಗೆ ಕುಪ್ಪಸ ಸುತ್ತುತಲಿ ||
ದಿಟ್ಟನೋಲೆ ಮೊಣಕಾಲಿಗೆ ತಗಲಿಸಿ
ಗಟ್ಟಿ ಕಂಕಣ ಕಿವಿಗಿಟ್ಟು
ತೊಟ್ಟಿಲೊಳಗೆ ಶಿಶು ಅಳುವುದ ಕಂಡು
ಕಟ್ಟಿದ ನವಿಲನು ತೂಗಿದಳು ||
ಅಂಗನೆ ಚೌರಿ ಕಾಲಿಗೆ ಕಟ್ಟಿ
ಮುಂಗೈಗೆ ತಾಳಿಯ ಬಿಗಿದು
ಶೃಂಗಾರ ಸರವ ನಡುವಿಗೆ ಕಟ್ಟಿ
ರಂಗನ ಸ್ಮರಿಸುತ ಹೊರಗೆ ನಡೆದಳು ||
ಹಸುವಿಗಿಟ್ಟಳು ಹಾಲು ಓಗರವ
ಬಿಸಿ ಮಡ್ಡಿಯ ಗಂಡಗೆ ಹಾಕಿ
ಸೊಸೆಯನು ಅಟ್ಟಿ ತೊತ್ತನೆ ಪಾಲಿಸಿ
ಮೊಸರು ಕಾಸಿ ಹೆಪ್ಪು ಕೊಡುತಲಿದ್ದಳು ||
ಗಿಳಿಗೆ ಹಾಸಿದಳು ಹಾಸು ಮಂಚವ
ಅಳಿಯನ ಪಂಜರದೊಳಗಿರಿಸಿ
ತಳಿಗೆಯನಿಟ್ಟು ತಮ್ಮನ ಮಲಗಿಸಿ
ತೊಟ್ಟಿಲೊಳಗೆ ಎಡೆ ಮಾಡಿದಳು ||
ಅಟ್ಟವೆಂದ್ಹತ್ತಿ ಅಗಳಿಯ ಮೇಲೆ
ಇಟ್ಟಳು ಸಾದೆಂದು ಸಗಣಿಯನು
ಕಟ್ಟ ಬಾಯಿಗೆ ಕಾಡಿಗೆ ಹಚ್ಚಿ
ಕೃಷ್ಣನ ಸ್ಮರಿಸುತ ಹೊರಗ್ಹೊರಟಳು ಸಕಿ ||
ಮಾನಿನಿ ಒಬ್ಬಳು ಸಂನ್ಯಾಸಿಯ ಕಂಡು
ಧೇನಿಸಿ ಕೂಸೆಂದತ್ತಬರಲು
ಏನು ಗಾಳಿ ಅವರಿಗೆ ಸೋಕಿತೆ ಎಂದು
ಪುರಂದರವಿಠಲ ನಗುತಲಿದ್ದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments