ಛೀ ಹಳಿ ಥೂ ಖೋಡಿ ಪಾಪಿ ಮನವೆ

ಛೀ ಹಳಿ ಥೂ ಖೋಡಿ ಪಾಪಿ ಮನವೆ

( ರಾಗ ರೇಗುಪ್ತಿ. ಝಂಪೆ ತಾಳ) ಛೀ ಹಳಿ ಥೂ ಖೋಡಿ ಪಾಪಿ ಮನವೆ ||ಪ|| ಕುಹಕ ಬುದ್ಧಿಗಳನ್ನು ಬಿಡು ಕಂಡ್ಯ ಮನವೆ ||ಅ|| ಬಣ್ಣದ ಬೀಸಣಿಗ್ಯಂತೆ ಹೆಣ್ಣು ತಿರುಗೋದು ಕಂಡು ಕಣ್ಣು ಸನ್ನೆಯ ಮಾಡಿ ಕೈಹೊನ್ನು ತೋರಿ ಸುಣ್ಣದ್ಹರಳಿನ ಮೇಲೆ ತಣ್ಣೀರು ಹೊಯ್ದಂತೆ ಕಣ್ಣಿಲಿ ಕೆಂಡವಾ ಚೆಲಿಕೊಂಬೆ ಮನವೆ || ವಾಸುದೇವನ ಪೂಜೆ ಒಮ್ಮೆ ಮಾಡೆಂದರೆ ಬೇಸತ್ತುಕೊಂಡು ತಲೆ ಚಟ್ಟಿಕ್ಕಿ ಕುಳಿತೆ ಆ ಸಮಯದಲ್ಲೊಬ್ಬ ಕಾಸು ಕೊಡುವೆನೆನಲು ದಾಸಿಯಾ ಮಗನಂತೆ ಬೆನ್ನಟ್ಟಿ ಹೋದೆ ಮನವೆ || ಪಗಡೆ ಚತುರಂಗ ಕವಡೆಯನಾಡಕರೆದರೆ ನಿಗುರಿದುವು ಕರ್ಣಗಳು ಮಚ್ಛೆಯಂತೆ ಜಗದೀಶನಾ ದಿನದಿ ಜಾಗರಕೆ ಕರೆದರೆ ಮುಗಿಲ್ಹರಿದು ಬಿದ್ದಂತೆ ಧರೆಗಿಳಿವೆ ಮನವೆ || ನೆರೆಹೊರೆ ಮನೆಯಲ್ಲಿ ಪ್ರಸ್ತವಾಗಲು ಆಗ ಕರೆಯದೆ ಪೋಗಿನ್ನು ಹಾಳುಹರಟೆ ಬರಗೆಟ್ಟು ನೂರಾರು ಸುದ್ದಿ ಹೇಳುತ ಅವನ ಹಿರಿಯಮಗನಂತೆ ಉದರವ ಪೊರೆದೆ ಮನವೆ || ಬಿಂದುಮಾತ್ರವೆ ಸುಖವು ದುಃಖ ಪರ್ವತದಷ್ಟು ಸಂದೇಹವಿಲ್ಲವಿದು ಶಾಸ್ತ್ರಸಿದ್ಧ ತಂದೆ ಸಿರಿಪುರಂದರವಿಟ್ಠಲರಾಯನ್ನ ವಂದನೆಯ ಮಾಡಿ ನೀ ಸುಖಿಯಾಗೊ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು