ಚಂದ್ರಚೂಡ ಶಿವ

ಚಂದ್ರಚೂಡ ಶಿವ

(ರಾಗ ಶಂಕರಾಭರಣ. ಆದಿ ತಾಳ.) ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣಾ ನಿನಗೇ ನಮೋ ನಮೋ ಸುಂದರ ಮೃಗಧರ ಪಿನಾಕಧನುಕರ ಗಂಗಾಶಿರ ಗಜಚರ್ಮಾಂಬರಧರ ನಂದಿ ವಾಹನಾನಂದದಿಂದ ಮೂರ್ಜಗದಿ ಮೆರೆವನು ನೀನೆ ಕಂದರ್ಪನ ಕ್ರೋಧದಿಂದ ಕಣ್ದೆರೆದು ಕೊಂದ ಉಗ್ರನು ನೀನೆ , ಘಟ- ದಿಂದುದಿಸಿದ ವಿಷ ತಂದು ಭುಂಜಿಸಿದವ ನೀನೆ ಇಂದಿರೇಶ ಶ್ರೀ ರಾಮನ ಚೆಂದದಿ ಪೊಗಳುವ ನೀನೆ ಬಾಲ ಮೃಕಂಡನ ಕಾಲನು ಎಳೆವಾಗ ಪಾಲಿಸಿದವ ನೀನೆ ಕಾಲಕೂಟವನು ಪಾನಮಾಡಿದ ನೀಲಕಂಠನು ನೀನೆ ವಾಲಯದಿ ಕಪಾಲವ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೆ ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೆ ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಪುರನಿವಾಸನು ನೀನೆ ಕರದಲಿ ವೀಣೆಯ ಗಾನವ ಮಾಡುವ ನಮ್ಮ ಉರಗ ಭೂಷಣ ನೀನೆ ಕೊರಳಲಿ ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವ ನೀನೆ ಗರುಡಗಮನ ಶ್ರೀ ಪುರಂದರ ವಿಠಲಗೆ ಪ್ರಾಣಪ್ರಿಯನು ನೀನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು