ಚಂದ್ರಗಾವಿಯನಿಟ್ಟು.

ಚಂದ್ರಗಾವಿಯನಿಟ್ಟು.

( ರಾಗ ಆರಭಿ. ಅಟ ತಾಳ) ಚಂದ್ರಗಾವಿಯನಿಟ್ಟು ದುಂಡು ಮುತ್ತನೆ ಕಟ್ಟಿ ಪಿಂಡ್ಯಾದ ರುಳಿಯನಿಟ್ಟು ಗೆಂಗಾವಿನ ಹಾಲ ಹರವಿಯೊಳಿಟ್ಟುಕೊಂಡು ಬಂದಳೆ ಕೇರಿಗಾಗಿ ||೧|| ಸಂಜೆರಾಘವನುಟ್ಟು ಸಂಜನೋಲೆಯನಿಟ್ಟು ಪಂಜರದರಗಿಣಿಯ ಅಂಜಲಿ ಮೇಲಿಟ್ಟು ಮುದ್ದನಾಡುತ ರಂಗನಿದ್ದ ಕೇರಿಗೆ ಬಂದಳು ||೨|| ಹಾಲ ಕೊಳ್ಳಿರೆಂದು ಸಾರಿದಳೀ ಬಾಲೆ ಕೇರಿ ಕೇರಿಯೊಳಗೆ ಬಾಲ ಸ್ತ್ರೀ ಪುರುಷರು ಲಾಲಿಸಿ ಕೇಳ್ದರು ಹಾಲಿನ ಬೆಲೆಗಳನು ||೩|| ಹಾಲು ಮಾರುವ ಧ್ವನಿಯಾಲಿಸಿ ರಂಗಯ್ಯ ಮೇಲಿನ ಕೇರಿಯೊಳು ನಾಳೆ ನಮ್ಮನೆಯಲ್ಲಿ ಪ್ರಸ್ತವೀಳ್ಯಗಳುಂಟು ಹಾಲೆನ್ನ ಇರಿಸೆಂದನು ||೪|| ಕೊಂಬವ ನೀನಲ್ಲ ಡಂಭಕತನವೇತಕೊ ಗಂಡನುಳ್ಳವಳು ನಾನು ಭೂಮಂಡಲದೊಳಗುಳ್ಳ ಅರಸರ ಕೂಡ್ಹೇಳಿ ದಂಡ ತರಿಸುವೆನೆಂದಳು ||೫|| ಬಾಲೆ ಮಾನಿನಿರನ್ನೆ ಲೋಲಾಕ್ಷಿ ಲಾಲಿಸಿ ಈಗ ನಾ ನುಡಿವ ಮಾತ ಹಾಲಿನ ಬೆಲೆ ಹೇಳೆ ಏನು ಮಾನಿನಿರನ್ನೆ ಬೇಡಿದ್ದ ಕೊಡುವೆನೆಂದ ||೬|| ಏಕೆಲವೊ ಇಂಥ ಪುಂಡತನವು ಸಲ್ಲ ಕಮಲಜಾತಜನಕ ನಾ ಕಾಯಿಸಿದ ಒಳ್ಳೆ ಎಮ್ಮೆಯ ಹಾಲಿದು ಒಮ್ಮನೆ ಹೊನ್ನೆಂದಳು ||೭|| ಕೈಯಲ್ಲಿ ಕೊಳಲು ನೊಸಲ ನೀಳದ ನಾಮ ಆಲದ ಮರನಡಿಯೆ ಬಾಲೆ ಮೊದಲು ಹಾಲ ಮಾರಿದ ಸುಂಕಕೆ ನೀಲ ಸೆರಗ ಪಿಡಿದ ||೮|| ಅಡವಿಗಂಕೆಗಳಿಲ್ಲ ಕೊಡಕೆ ಸುಂಕಗಳಿಲ್ಲ ತಡೆವವ ನೀನಾರೆಲೊ ನಡೆ ಊರ ಮುಂದಕ್ಕೆ ತಳವಾರರೊಯ್ದರೆ ಹದನ ಪೇಳುವೆನೆಂದಳು ||೯|| ಬಲ್ಲೆ ಬಲ್ಲೆನು ನಿನ್ನ ಬಗೆಯ ಮಾತುಗಳೆಲ್ಲ ಎಲ್ಲಿಯ ತಳವಾರರೆ ಹಾಗಲ್ಲದಿದ್ದರೆ ಒಂದು ವೀಳ್ಯವ ತೆಕ್ಕೊಂಡು ಅಲ್ಲಲ್ಲಿ ದೂರದಿರೆ ||೧೦|| ಕೆಟ್ಟನಲ್ಲೊ ಕೃಷ್ಣ ಇತ್ತಲೇತಕೆ ಬಂದೆ ಅತ್ತೆ ಮಾವಂದಿರುಂಟು ಬಿಟ್ಟು ಬಿಡುವರೆನ್ನ, ಸರಸವಾಡಲು ಸಲ್ಲ, ಕಟ್ಟಿ ಕೊಂಬೆನು ಕಾಲನು ||೧೧| ಮಾನಿನಿಮಣಿ ಕೇಳೇ ನಾಗಸಂಪಿಗೆ ಹೂವ ಜಾಣರು ಬಿಡುವರೇನೆ ಜಾಣತನದ ಮಾತು ಆಡೋದು ತರವಲ್ಲ ಏಣಾಕ್ಷಿ ಲಾಲಿಪುದು ||೧೨ || ಹೊತ್ತು ಹೋಯಿತು ರಂಗ ಇನ್ನಾರಿಗ್ಹೇಳಲಿ ಅತ್ತಿಗೆ ಮೈದುನರು ಮತ್ತೆ ನಿನ್ನೊಡನಾಡುವುದ ಕೇಳ್ದರೆ ಕುಟ್ಟಿ ಎನ್ನ ಕೆಡವರೆಂದಳು ||೧೩|| ದುಂಡು ಮಲ್ಲಿಗೆ ಹುವ ಕಂಡರೆ ಬಿಡುವರೆ ಪುಂಡರೀಕಾಕ್ಷಿ ಕೇಳು ದಂಡಿಸದಿರು ಎನ್ನ ಅಂಡಲಿಸಲು ಬೇಡ ಗಂಡನೊಡನೆ ನುಡಿದು ||೧೪|| ಏತಕಿನಿತು ಛಲ ಎನ್ನೊಳಗೀ ಪರಿ ಮಾತುಳಾಂತಕ ಕೃಷ್ಣಯ್ಯ ಮಾತು ಮಾತಿಕೆ ಪರಿಯಿದು ತರವಲ್ಲ ಬಿದ್ದರೆ ಅರಿತನವ ||೧೫|| ಕಣ್ಣಿಲಿ ಕಂಡ ಮೇಲಿದ ಬಿಡುವವರುಂಟೆ ಎಣ್ಣಿಸ ಬೇಡ ನೀನು ಬೆಣ್ಣೆ ಕಳ್ಳನು ಕೃಷ್ಣ ಕಣ್ಣ ಸನ್ನೆಯ ಮಾಡಿ ಹೆಣ್ಣ ಮೋಹಿಸುತಿದ್ದನು ||೧೬|| ಮಾವ ಸೆರಗ ಬಿಡೊ, ಭಾವ ಸೆರಗ ಬಿಡೊ, ಮಾವಯ್ಯ ಬಿಡು ಸೆರಗ ಮಾವನು ನಾನಲ್ಲ, ಭಾವನು ನಾನಲ್ಲ, ನಿನ್ನ ಮಾವನ ಮಗನು ಕಾಣೆ ||೧೭|| ಅಣ್ಣ ಸೆರಗ ಬಿಡೊ, ತಮ್ಮ ಸೆರಗ ಬಿಡೊ, ಅಣ್ಣಯ್ಯ ಬಿಡು ಸೆರಗ ಅಣ್ಣನು ನಾನಲ್ಲ, ತಮ್ಮನು ನಾನಲ್ಲ, ನಿನ್ನಣ್ಣನ ಭಾವ ಕಾಣೆ ||೧೮|| ಕಂದ ಸೆರಗ ಬಿಡೊ, ತಂದೆ ಸೆರಗ ಬಿಡೊ, ಕಂದಯ್ಯ ಬಿಡು ಸೆರಗ ಕಂದನು ನಾನಲ್ಲ, ತಂದೆಯು ನಾನಲ್ಲ, ನಿನ್ನ ಕಂದನ ತಂದೆ ಕಾಣೆ ||೧೯|| ನೆತ್ತಿ ಮೇಲಿನ ಕೊಡ ಎತ್ತಿ ನೀಡಾಡಲು ಅಪ್ಪಿಕೊಂಬಳೆ ಕೃಷ್ಣನ ಭಕ್ತರ ಸಲಹುವ ಪುರಂದರವಿಠಲನ ಚಿಕ್ಕ ವೆಂಕಟರಾಯನ ||೨೦||
ದಾಸ ಸಾಹಿತ್ಯ ಪ್ರಕಾರ
ಬರೆದವರು