ಗೋಪಿ ನಿನ್ನ ಮಗಗಂಜುವೆನಮ್ಮ

ಗೋಪಿ ನಿನ್ನ ಮಗಗಂಜುವೆನಮ್ಮ

( ರಾಗ ಕೇದಾರಗೌಳ. ಆದಿ ತಾಳ) ಗೋಪಿ ನಿನ್ನ ಮಗಗಂಜುವೆನಮ್ಮ ಪರಮಾತ್ಮನು ಬೆಣ್ಣೆಯ ಬೇಡುತ್ತಲಿಹನೆ ಗೋಪಿ ನಿನ್ನ ಮಗಗಂಜುವೆನಮ್ಮ ||ಪ|| ಕಡೆವುತ್ತ ಪಾಡಲು ಅತಿಶಯ ಹರುಷದಿ ಕಡಗ ಪೆಂಡೆಯ ಕಾಲ್ ಝಣರೆನುತ ಕಡೆಯದೆ ಕೈಯಾಡದೆ ಸುಮ್ಮನಿರಲು ತುಡುಕಿ ಬೆಣ್ಣೆಯ ಮೆದ್ದು ಓಡಿ ಹೋಹ || ಮುಂಗಾಲ ಮಕ್ಕಳ ತೊಟ್ಟಿಲೊಳಗೆ ಹಾಕಿ ತಿಂಗಳ ಶಿಶುವ ನೆಲಕೆಡಹಾಕುವ ಅಂಗಳದೊಳಗೆಲ್ಲ ಚಾಲಿವಾರೀ ವ್ಯಾಪಾರ ಹೆಂಗಳೊಡನೆ ಮಾತನೊಲಿದಾಡುವ || ಅರೆವ ಗುಂಡ ದೇವರ ಜಗಲಿಯೊಳಿಟ್ಟು ಹರಿಗಳ ತಂದು ರಾಯ ಕಲ್ಲ ಮೇಲಿಟ್ಟ ಮರೆದೊರಗಿದ್ದ ಮಕ್ಕಳ ಬಡಿದೆಬ್ಬಿಸಿ ಅರಿಯದಂತೆ ಬೊಬ್ಬಿಡುವ || ದೈವದೆಡೆಯಲಿದ್ದ ಮೀಸಲನೆಲ್ಲವ ನೈವೇದ್ಯ ಸಲ್ಲದೆಂದು ನಗುತಲುಂಡ ದೈವವು ತನಗಿಂತ ಮಿಗಿಲೆ ಮರುಳುಗಳಿರ ದೈವವೆಲ್ಲವು ತಾನೇಯೆಂದ || ಕಾದಾರಿದ ಹಾಲ ಕಲಕಿ ಕೆನೆಯ ಮೆದ್ದು ಕಾದಿಹನಂತೆ ಬೆಕ್ಕ ಬೆದರಿಸುವ ಮಾಧವನ ಮಹಿಮೆ ಅಳವಲ್ಲವಾರಿಗೂ ಶ್ರೀ ಪುರಂದರವಿಠಲ ನಮ್ಮ ಬಿಡನಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು