ಗೋಪಾಲದಾಸರಾಯ ನಿನ್ನಯ ಪಾದ
---- ರಾಗ ಮೋಹನ(ಭೂಪ್ ) ಅಟತಾಳ (ದೀಪಚಂದಿ)
ಗೋಪಾಲದಾಸರಾಯ ನಿನ್ನಯ ಪಾದ
ನಾ ಪೊಂದಿದೆನು ನಿಶ್ಚಯ ||ಪ||
ಈ ಪೀಡಿಪ ತಾಪತ್ರಯಗಳನೋಡಿಸಿ
ಕೈಪಿಡಿದೆನ್ನನು ನೀ ಪಾಲಿಸನುದಿನ ||ಅ.ಪ||
ಘೋರವ್ಯಾಧಿಗಳ ನೋಡಿ ವಿಜಯರಾಯ
ಭೂರಿಕರುಣವ ಮಾಡಿ
ತೋರಿದರಿವರೇ ಉದ್ಧಾರಕರೆಂದಂದಿ-
ನಾರಭ್ಯ ತವಪಾದ ಸೇರಿದೆ ಸಲಹೆಂದು|
ಸೂರಿಜನ ಸಂಪ್ರೀಯ ಸುಗುಣೋ-
ದಾರ ಎನ್ನಯ ದೋಷನಿಚಯವ
ದೂರಗೈಸು ದಯಾಂಬುಧಿಯೆ ನಿ-
ವಾರಿಸದೆ ಕರಪಿಡಿದು ಬೇಗ ||೧||
ಅಪಮೃತ್ಯುವನು ತೊಡೆದೆ ಎನ್ನೊಳಗಿಪ್ಪ
ಅಪರಾಧಗಳ ಮರೆದೆ
ಚಪಲಚಿತ್ತನಿಗೊಲಿದು ವಿಪುಲಮತಿಯನಿತ್ತು
ನಿಪುಣನೆಂದೆನಿಸಿದೆ ತಪಸಿಗಳಿಂದಲಿ |
ಕೃಪಣವತ್ಸಲ ನಿನ್ನ ಕರುಣಕೆ
ಉಪಮೆಗಾಣೆನೊ ಸಂತತವು ಕಾ-
ಶ್ಯಪಿಯೊಳಗೆ ಬುಧರಿಂದ ಜಗದಾ-
ಧಿಪನ ಕಿಂಕರನೆನಿಸಿ ಮೆರೆದೆ ||೨||
ಎನ್ನ ಪಾಲಿಸಿದಂದದಿ ಸಕಲ ಪ್ರ-
ಪನ್ನರ ಸಲಹೋ ಮೋದಿ
ಅನ್ಯರಿಗೀ ಪರಿ ಬಿನ್ನಪಗೈಯೆ ಜ-
ಗನ್ನಾಥವಿಠಲನ ಸಂಸ್ತುತಿಸುವ ಧೀರ |
ನಿನ್ನ ನಂಬಿದ ಜನರಿಗೀಪರಿ
ಬನ್ನವೇ ಭಕ್ತಾನುಕಂಪಿ ಶ-
ರಣ್ಯ ಬಂದೊದಗೀ ಸಮಯದಿ ಅ-
ಹರ್ನಿಶಿ ದ್ಯಾನಿಸುವೆ ನಿನ್ನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments