ಗೋಕುಲದೊಳು ನಿನ್ನ ಮಗನ ಹಾವಳಿ

ಗೋಕುಲದೊಳು ನಿನ್ನ ಮಗನ ಹಾವಳಿ

( ರಾಗ ಸೌರಾಷ್ಟ್ರ. ಅಟ ತಾಳ) ಗೋಕುಲದೊಳು ನಿನ್ನ ಮಗನ ಹಾವಳಿ ಘನವಾಯಿತಮ್ಮ ಜೋಕೆ ಮಾಡಿಕೊ ಇಂಥ ದುರುಳತನಕೆ ನಾವು ನಿಲ್ಲೆವಮ್ಮ ||ಪ|| ಬಾಲರ ಒಡಗೂಡಿ ಬಂದೆಮ್ಮ ಮನೆಗಳ ಪೊಗುವನಮ್ಮ , ಒರಳ ಮೇಲೇರಿ ನೆಲುವಿನ ಮೇಲಿದ್ದ ಬೆಣ್ಣೆಯ ಮೆಲುವನಮ್ಮ ಜಾಲವ ಮಾಡಿ ಎಲ್ಲರಿಗಿಂದ ತಾ ಮುನ್ನೆ ಜಾರ್ವನಮ್ಮ, ಗೋ- ಪಾಲ ಬೇಡೆಂದು ಹೇಳಿದರೆ ಇವಗೆ ಬುದ್ಧಿ ಸಾಲದಮ್ಮ || ಗಂಡನುಳ್ಳವಳೆಂದು ಬೇಡಿಕೊಂಡರೆ ಮಾತ ಕೇಳನಮ್ಮ, ಈ ಪುಂಡುಗಾರ ನಮ್ಮ ಪುರವನೆಲ್ಲ ಸೂರೆಗೊಂಡನಮ್ಮ ಗಂಡರೆಲ್ಲರು ಇವನ ನೋಡಿ ತಮ್ಹೆಂಡಿರ ಬಿಡುವರಮ್ಮ, ಕಂಡ- ಕಂಡ ವೇಳೆಯಲ್ಲಿ ಚಿಕ್ಕ ಚೆಲುವೆಯರ ಕೂಡ್ವನಮ್ಮ || ಮಾರಲೀಸನು ಹಾಲು ಮೊಸರ ಕಂಡರೆ ಬಿಟ್ಟು ಬಾರನಮ್ಮ , ತನ್ನ ವಾರಿಗೆ ಸತಿಯರ ಒಲಿಸಿಕೊಂಬ ಮಾಯಗಾರನಮ್ಮ ನಾರಿ ಕೇಳಿವನ ನಡತೆ ಯಾರಿಗೂ ಸರಿ ಬಾರದಮ್ಮ, ನಮ್ಮ ಮಾರಜನಕ ಪುರಂದರವಿಠಲರಾಯ ಜಾರನಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು