ಗೋಕುಲದೊಳಗಿರಲಾರೆವಮ್ಮ
( ರಾಗ ಆನಂದಭೈರವಿ ಅಟ ತಾಳ)
ಗೋಕುಲದೊಳಗಿರಲಾರೆವಮ್ಮ ಗೋಪ್ಯಮ್ಮ ಕೇಳೆ
ಸಾಕು ಸಾಕು ನಮಗೇಕೀ ವ್ರಜವು ಆ ಕೃಷ್ಣನ ಕಾಟದಿ ||ಪ ||
ಹಾಲು ಮೊಸರು ಕದ್ದರೆ ಕದಿಲಿ ಗೋಪ್ಯಮ್ಮ ಕೇಳೆ
ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ ಗೋಪ್ಯಮ್ಮ ಕೇಳೀ-
ರೇಳು ಭುವನದೊಳೋಲಾಡುತ್ತಿರಲಿ
ಆಲಯವನು ಪೊಕ್ಕು ಬಾಳ ಸಂಭ್ರಮದಿ
ಬಾಲೆಯರೆಲ್ಲರ ಬತ್ತಲೆ ಮಾಡಿಸಿ ಶಾಲೆಗಳೆಲ್ಲವ
ಮೇಲಕೆ ಹಾರಿಸಿ ಆಲಿಂಗಿಸಿಕೊಂಡು ಬರುತಾನಮ್ಮ ||
ಮನೆಗೆ ತಾನಾಗಿ ಬಂದರೆ ಬರಲಿ ಬಾಹೋ ವೇಳೆಯಲಿ
ಗೆಳೆಯರ ಕೂಡಿಕೊಂಡು ಇರಲಿ ಕರೆತಂದರೆ ತರಲಿ
ಅನುಬಂಧನಾಗಿ ಇದ್ದರೆ ಇರಲಿ
ಅನುವು ನೋಡಿಕೊಂಡಾ ವೇಳೆಯಲಿ
ಉಣಬಿಟ್ಟುಣಿಸಿ ಆಕಳ ಕರುಗಳ
ಮನೆಯವರೆಲ್ಲರ ತಾನೇ ಎಬ್ಬಿಸಿ ಮನೆಯಲ್ಲ ಸೂರಾಡಿದನಮ್ಮ ||
ಬಾರಿ ಬಾರಿಗೆ ಒಲಿದಕಳ್ಳ ಯಶೋದೆ ಕೇಳೇ
ಊರ ಹೆಂಗಳರ ಕೂಡಿನ ಗೊಲ್ಲ ಗೋಪ್ಯಮ್ಮ ಕೇಳೇ
ಯಾರ ಮುಂದ್ಹೇಳುವುದು ಈ ಸೊಲ್ಲ
ವಾರಿಗೆಯ ಸಂಸಾರ ಮಾಡುವನು
ನಾರಿಯರೆಲ್ಲರ ನಂಬಿಸಿ ಕೆಡಿಪ ವಿ-
ಕಾರ ಮಾಡದ ಹಾಗೆ ನೀ ಕರೆಸಿ ಪುರಂದರವಿಠಲಗೆ ಬುದ್ಧಿಯ ಹೇಳಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments