ಗೊಲ್ಲತಿಯರೆಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿ ಪುಟ್ಟಿಸಿ
(ಮೋಹನರಾಗ ಛಾಪುತಾಳ)
ಗೊಲ್ಲತಿಯರೆಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿ ಪುಟ್ಟಿಸಿ
ಕಳ್ಳನೆಂದು ದೂರುತಾರೆ ಗೋಪಿ ಎನ್ನ ಕೊಲ್ಲಬೇಕೆಂಬ ಬಗೆಯೆ ||ಪ||
ಹರವಿಯ ಹಾಲು ಕುಡಿಯಲು ಎನ್ನ ಹೊಟ್ಟೆ
ಕೆರೆಯೇನೆ ಹೇಳಮ್ಮಯ್ಯ
ಕರೆದು ಅಣ್ಣನ ಕೇಳಮ್ಮ ಉಂಟಾದರೆ
ಒರಳಿಗೆ ಕಟ್ಟಮ್ಮಯ್ಯ ||೧||
ಮೀಸಲು ಬೆಣ್ಣೆಯನು ಮೆಲುವುದದು ಎನಗೆ
ದೋಷವಲ್ಲವೇನಮ್ಮಯ್ಯ
ಆಸೆ ಮಾಡಿದರೆ ದೇವರು ಕಣ್ಣ
ಮೋಸದಿ ಕುಕ್ಕೋನಮ್ಮಯ್ಯ ||೨||
ಅಟ್ಟವನೇರಿ ಹಿಡಿವುದು ಅದು ಎನಗೆ
ಕಷ್ಟವಲ್ಲವೆ ಹೇಳಮ್ಮಯ್ಯ ನೀ
ಕೊಟ್ಟ ಹಾಲು ಕುಡಿಯಲಾರದೆ ನಾನು
ಬಟ್ಟಲೊಳಗಿಟ್ಟು ಪೋದೆನೆ ||೩||
ಪುಂಡುತನ ಮಾಡಲು ನಾನು ದೊಡ್ಡ
ಗಂಡಸೇನೆ ಹೇಳಮ್ಮಯ್ಯ ಎನ್ನ
ಕಂಡವರು ದೂರುತಾರೆ ಗೋಪಮ್ಮ ನಾ ನಿನ್ನ
ಕಂದನಲ್ಲವೇನೆ ಅಮ್ಮಯ್ಯ ||೪||
ಉಂಗುರದ ಕರದಿಂದ ಗೋಪಮ್ಮ ತನ್ನ
ಶೃಂಗಾರದ ಮಗನೆತ್ತಿ
ರಂಗವಿಠಲನ ಪಾಡಿ ಉಡುಪಿನ ಉ-
ತ್ತುಂಗ ಕೃಷ್ಣನ ತೂಗಿದಳು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments