ಗುರುವಿನ ಚರಣವ ನೆನೆವುತಲನುದಿನ

ಗುರುವಿನ ಚರಣವ ನೆನೆವುತಲನುದಿನ

(ಶಂಕರಾಭರಣ ರಾಗ ತ್ರಿವಿಡೆ ತಾಳ) ಗುರುವಿನ ಚರಣವ ನೆನೆವುತಲನುದಿನ ಪರದೊಳು ದೈವದ ನೆಲೆ ನೋಡು ||ಪ|| ಗುರುವಿನ ಕರುಣಕಟಾಕ್ಷವದಲ್ಲದೆ ನರರಿಗೆ ದೊರಕದು ಪರಸುಖವು ಹಿರಿಯರ ಅಭಿಮತವಿಲ್ಲದ ಗೃಹದೊಳು ಕರೆಕರೆಯಾಗಿದೆ ಕೌತುಕವು ||೧|| ಸ್ಥಿರವಾಗಿ ನಿಲ್ಲದ ಮನವು ಭ್ರಮೆಯೊಳು ನೆರೆವುದು ತನ್ನೊಳು ಘಾತಕವು ಸೆರೆವಿಡಿಯಲು ಹರಿವಿಡಿದಿಹನಾತನ ತೊರೆವುದು ಭವಭಯ ಸೂತಕವು ||೨|| ಯೋಗಿಯ ಹೃದಯದಿ ಸಕಲಾಗಮ ಸಮ- ನಾಗಿಯೆ ತೋರ್ಪುದು ದೃಢವಾಗಿ ಸಾಗರ ಸುತ್ತಿದ ಭೂಭಾಗದ ಸರಿ ಯೋಗಿಯ ದೃಷ್ಟಿಯೆ ಘನವಾಗಿ ||೩|| ಬಾಗಿದ ಕಬ್ಬಿನ ಕೋಲೊಳು ರುಚಿಕರ- ವಾಗಿಯೆ ತೋರುವ ಪರಿಯಾಗಿ ರಾಗಿಯ ಶಿಲೆ ತಾ ಬಳಲಿದೆನೆನುತಲೆ ಭಾಗೆಯ ಕೊಂಬುದೆ ಸಮವಾಗಿ ||೪|| ನಂಬದಿರಂಬರ ವಾದಿಯ ಅಂಶಕ ತುಂಬಿದ ಕುಂಭ ದೃಢದಿಂದ ಅಂಬರದೊಳಗಣ ಮೇಘಕೆ ವಾಯುವು ಬೆಂಬಲವಾಗಿಹ ದಯದಿಂದ ||೫|| ಸಂಭ್ರಮದಿಂದಲಿ ಗರ್ಜಿಸಿ ನಾಲ್ದೆಸೆ ಅಂಬಿಸಿ ಪೋಗುವ ಪರಿಯಿಂದ ಅಂಬುಜಭವ ಬರೆದಕ್ಷರ ಮಾಸಲು ಅಂಬರ ಬಯಲಹ ತೆರದಿಂದ ||೬|| ಶುದ್ಧವಶುದ್ಧವು ಆಗಿಹ ಪೃಥ್ವಿಯ ಬುದ್ಧವಾಗಿಯೆ ತೊಳೆದವರಾರು ಅಬ್ಧಿಯೆ ಮಧ್ಯದಿ ಎದ್ದ ವಾರಿಗಳನು ತಿದಿಯೆ (ತಿದ್ದಿಯೆ?) ಪಸರಿಸುವವರಾರು ||೭|| ಇದ್ದರೆ ಸರ್ವರ ಭವನದೊಳಗ್ನಿಯೆ ಮೆದ್ದವ ಶುದ್ಧವೆಂಬವರಾರು ಹೊದ್ದಿದ ಮೂರುತಿ ನಾಲ್ದೆಸೆಯೊಳಗಿರೆ ಬದ್ಧವಾಗಿಯೆ ಕಟ್ಟಿಕೊಳಲ್ಯಾರು ||೮|| ಬಯಲೊಳಗಿರುತಿಹ ಬಹು ಝೇಂಕಾರವ ನಯದೊಳು ನೋಡಿದರೇನುಂಟು ಬಯಲೊಳು ಮೂರಕ್ಷರವನೆ ಬಿತ್ತಲು ಮೈಲಿಗೆ ತಳಿಸುವ ಬೆಳೆಯುಂಟು ||೯| ಪಯಣದ ಮನೆಸಿರಿ ಸೊಬಗನು ಜಯಿಸುವ ಹಯವನು ಏರುವ ಬಗೆಯುಂಟು ದಯದೊಳು ಶ್ರೀಗುರು ವಿರಚಿಸಿಯಿತ್ತರೆ ಕ್ರಮವಿಕ್ರಯದೊಳು ಫಲವುಂಟು ||೧೦|| ಬೇಡನು ಸಲಹಿದ ಆಡು ತಾ ಯಾಗಕೆ ಬೇಡವೆಂಬರಾರು ಶಾಸ್ತ್ರದಲಿ ಕಾಡಿನೊಳಿರುತಿಹ ಮೃಗವಾಲದ ಸಿರಿ ನೋಡು ನೀ ನಿತ್ಯದಿರಾಸ್ತ್ರದಲಿ ||೧೧|| ಕೋಡಗನಾದರು ನೋಡಿಯೆ ಭಜಿಸಲು ಕೂಡುಗು ಹರಿಯ ಪರತ್ರದಲಿ ಕೂಡಿಕೊಂಡರೆ ಪರಬೊಮ್ಮನ ಮನದಲಿ ಆಡದು ಮಾಯದ ಸೂತ್ರದಲಿ ||೧೨|| ಕಸ್ತೂರೀ ಮೃಗ ಗೋರೋಚನ ಸಹ ಉತ್ತಮವಾಗಿಹ ಮುತ್ತುಗಳು ನಿತ್ಯದಿ ಕ್ರಯಗಟ್ಟಿ ಉಣ್ಣದೆ ಹುಲ್ಲನು ಕಿತ್ತು ಮೆದ್ದಾಡುವ ಅವಸ್ಥೆಗಳು ||೧೩|| ಮೃತ್ಯುವ ಕಾಣದೆ ಬೊಮ್ಮವನಡಗಿಸಿ ಎತ್ತಲಾದರೂ ಪೋದ ವಸ್ತುಗಳು ಭಕ್ತರಿಗಲ್ಲದೆ ಮನವಪರೋಕ್ಷದ ವಸ್ತುವ ಕಾಣದೆ ನಿತ್ಯದೊಳು ||೧೪|| ಜ್ಯೋತಿರ್ಮಯವಾಗಿಹ ವಸ್ತುವಿನೊಳು ಸೂತಕ ಹೊದ್ದುವುದೇನುಂಟು ಜಾತಿವಿಜಾತಿಯೊಳೊಲಿದಿಹ ಶಿವನವ ದೂತರ ನಂಬದರಾರುಂಟು ||೧೫|| ಓತು ಅಶುದ್ಧವನುಂಡರು ಕವಿಲೆಯೊ- ಳ್ಮಾತಿನ ವಾಸಿಯದೇನುಂಟು ನೀತಿ ವಿಹೀನರೊಳುದಿಸಿದ ಲವಣದ ಧಾತು ಕೂಡದೆ ಸವಿಯೇನುಂಟು ||೧೬|| ಧಾರುಣಿ ಭಾರವ ಮಿತಿಗಟ್ಟಿ ತಕ್ಕಡಿ- ಗೇರಿಸಿ ತೂಗಲು ಬಹುದೀಗ ವಾರಿಧಿಯನು ಮುಕ್ಕುಳಿಸಿಯೆ ಬತ್ತಿಸಿ ತೋರಿಸಲಪ್ಪುದು ಬಹುಬೇಗ ||೧೭|| ಧಾರುಣಿಯೊಳು ಗುರುಕರುಣದ ಅಳತೆ ಮು- ರಾರಿಗು ಸಿಲುಕದು ಅದು ಈಗ ತೋರಿತು ಅಲ್ಲಿ ವರಾಹತಿಮ್ಮಪ್ಪ ಕು- ಮಾರರು ವಾಜಿಯ ತಡೆದಾಗ ||೧೮|| --------ಇದು ನೆಕ್ಕರ ಕೃಷ್ಣದಾಸರ ರಚನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು