ಗರುವ ಗಂಭೀರ ನಾಯಕಾ

ಗರುವ ಗಂಭೀರ ನಾಯಕಾ

( ರಾಗ ಯದುಕುಲಕಾಂಭೋಜಿ(ಯರಕಲಕಾಂಭೋಜ?) . ಝಂಪೆ ತಾಳ) ಗರುವ ಗಂಭೀರ ನಾಯಕಾ ಹರಿಯೆ ||ಪ || ಹರಿಯೆ ಹಳಚಿಕೆವುಳ್ಳನಲ್ಲವೆ ಸುರೂಪಿ ಸಮಗುಣನು ನೀನಲ್ಲವೆ ಸಿರಿವಂತ ಸರ್ವಾಕಳಂಕ ನೀನಲ್ಲವೆ ಕರೆಸಿಕೊಳ್ಳೆಯೇಕೆನ್ನನು ಹರಿಯೆ || ವೇಳೆಯಲ್ಲವೆ ಅನು ಬಂದುದು ಕೇಳುತಿಲ್ಲವೆ ಕಂಜನೇತ್ರ ಸೋಳ ಸಾಸಿರದ ಗೋಪಿಯರೊಳಗಣ ಸೂಳುಪಾಳಿನಿಂ ತೆರಹಿಲ್ಲವೆ || ಕುಬುಜೆಯ ಕೂಟ ಬೇಟದೊಳಿದ್ದೆಯೊ ಅಂಬುಜೆಯಾಲಿಂಗನದೊಳಿದ್ದೆಯೊ ಅಂಬುಜನಾಭ ಪೇಳೆನ್ನಾಣೆ ನಿನ್ನ ಚುಬುಕ ಪಿಡಿದು ಮುದ್ದಾಡುವೆನೊ || ಏನೆನ್ನಬಾರದ ಎತ್ತೆನ್ನಬಾರದ ಸ್ವಾನುಭಾವಿ ನೀನೆಂತೆಂಬೆಯೊ ಆನೆ ಮರುಳಾಗಿ ಬಂದೇನಲ್ಲದೆ ನೀನೇ ಕೊಡೆ ಪಂಥ ಪ್ರಾಣೇಶನೆ || ಈಗ ತಾನಾದರೆ ಮನಸಾಯಿತೆ ನಿನ್ನ ಶ್ರೀಗೆ ಸಿಲುಕಿದ ಸಿರಿವಲ್ಲಭ ನಾಗಮಂಗಲದ ಚೆನ್ನ ಶ್ರೀಕೇಶವರಾಯ ಭೋಗಿ ಪುರಂದರವಿಠಲರಾಯನೆ ನಮೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು