ಕೊಂಡಾಡಲಳವೆ ನಿನ್ನಯ ಕೀರ್ತಿ
ಕೊಂಡಾಡಲಳವೆ ನಿನ್ನಯ ಕೀರ್ತಿ ಭೂ-
ಮಂಡಲದೊಳಗೆ ಹಯಗ್ರೀವ ಮೂರ್ತಿ|
ವೇದಂಗಳ ಜಲದಿಂದ ತಂದೆ ನೀ
ಪೋದ ಗಿರಿಯ ಬೆನ್ನೊಳಾಂತು ನಿಂದೆ|
ಮೇದಿನಿಯ ಕದ್ದೊಯ್ದನ ಕೊಂದೆ ಸಂ-
ವಾದದಿಂದ ಕಂಬದಿಂದಲಿ ಬಂದೆ||
ಚರಣಾಗ್ರದಲಿ ನದಿಯನು ಪೆತ್ತೆ ತೀಕ್ಷ್ಣ-
ಪರಶು ಹಿಡಿಯ ಬಾಹುಜರ ಕಿತ್ತೆ|
ನೆರೆನಂಬಿದಗೆ ಸ್ಥಿರಪಟ್ಟವನಿತ್ತೆ ದೊಡ್ಡ
ದುರುಳ ಕಾಳಿಂಗನ ಶಿರದಿ ನಿಂತೆ||
ಪತಿವ್ರತೆಯರ ಮಾನ ಭೇದನ
ಚತುರ ತುರಗವೇರಿ ನಲಿವನ|
ಕ್ಷಿತಿಯೊಳುತ್ತಮ ವಾದಿರಾಜನ ಸ್ವಾಮಿ
ಸತತ ರಕ್ಷಿಪ ಶ್ರೀ ಹಯವದನನ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments