ಕೇಳಿದ್ಯಾ ಕೌತುಕವನು ಕೇಳಿದ್ಯಾ
(ಶಂಕರಾಭರಣ ರಾಗ ಆದಿತಾಳ)
ಕೇಳಿದ್ಯಾ ಕೌತುಕವನು ಕೇಳಿದ್ಯಾ ||ಪ||
ಕೇಳಿದ್ಯಾ ಕೌತುಕವನು ನಾ
ಕೇಳಿದೆ ನಿನಗಿಂತ ಮುನ್ನು ಆಹಾ
ಚಾಳಿಕಾರ ಕೃಷ್ಣ ಪೇಳದೆ ಮಧುರೆಗೆ
ಕೋಳಿ ಕೂಗದ ಮುನ್ನ ನಾಳೆ ಪಯಣವಂತೆ ||ಅ.ಪ||
ಕರೆಯ ಬಂದಿಹನಂತೆ ಕ್ರೂರ ತಮ್ಮ
ಕಿರಿಯಯ್ಯನಂತೆ ಅಕ್ರೂರ ಪುರ
ಹೊರವಳಯದಲಿ ಬಿಟ್ಟು ತೇರ ಆಹಾ
ಹಿರಿಯನೆಂದು ಕಾಲಿಗೆರಗಲು ರಾಮಕೃ-
ಷ್ಣರ ರಕ್ಕಿಸಿಕೊಂಡು
ಮರುಳುಮಾಡಿದ ಬುದ್ಧಿ ||೧||
ಸೋದರಮಾವನ ಮನೆಯ ಬೆಳ-
ಗಾದರೆ ನಾಳಿನ ಉದಯ ಪರ-
ಮಾದರವಂತೆ ತ್ವರೆಯ ಅಲ್ಲಿ ತೋ-
ರಿದ ಮನಕೆ ನಾರಿಯ ಆಹಾ
ಸಾಧಿಮಲ್ಲ ಮೊದಲಾದ ಬಿಲ್ಲುಹಬ್ಬ
ಸಾಧಿಸಿಕೊಂಡು ಬರುವನೆಂಬ ಸುದ್ದಿ ||೨||
ಹುಟ್ಟಿದ ಸ್ಥಳವಂತೆ ಮಧುರೆ ಕಂಸ-
ನಟ್ಟುಳಿಗಾರದೆ ಬೆದರಿ ತಂ-
ದಿಟ್ಟ ತನ್ನ ತಂದೆ ಚದುರೆ ತೋರಿ
ಕೊಟ್ಟಳು ಭಯವನ್ನು ಬೆದರಿ ಆಹಾ
ಎಷ್ಟು ಹೇಳಲಿ ರಂಗವಿಠಲನು ಮಾವನ
ಭೆಟ್ಟಿಗಾಗಿ ಒಡಂಬಟ್ಟು ಪೋಗುವ ಸುದ್ದಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments