ಕಾಯೊ ಕರುಣಾನಂದ ಶ್ರೀಗುರು

ಕಾಯೊ ಕರುಣಾನಂದ ಶ್ರೀಗುರು

(ಕೇದಾರ ರಾಗ ಝಪ್ ತಾಳ) ಕಾಯೊ ಕರುಣಾನಂದ ಶ್ರೀಗುರು ಕಾಯೊ ಗುರು ಕೃಪಾನಿಧೆ ಕಾಯೊ ಕರುಣಿಸಿ ಎನ್ನ ಪೂರ್ಣ ನೀ ಕಾಯೊ ಪರಮನಿಧೆ ||ಧ್ರುವ|| ತೊಡಿಸಿ ಕರುಣಾನಂದ ಕವಚವ ಇಡಿಸೊ ಭಕುತಿವೈರಾಗ್ಯವ ದೃಢಗೊಳಿಸು ಜ್ಞಾನಪೂರ್ಣ ನೀ ಕಡಿಸೊ ಕಾಮಕ್ರೋಧವ ನಡೆಸಿ ನಿತ್ಯ ವಿವೇಕಪಥದಲಿ ಕೂಡಿಸೊ ನಿಜ ಸುಖಬೋಧವ ಬಿಡಿಸೊ ಭವಭಯ ಮೂಲದಿಂದಲಿ ಬಡಿಸೊ ಹರುಷಾನಂದವ ||೧|| ಹುಟ್ಟು ಹೊಂದುವ ಬಟ್ಟೆ ಮುರಹಿಸಿ ಕೊಟ್ಟು ಕಾಯೊ ಸತ್ಸಂಗವ ಗುಟ್ಟಿನೊಳು ನಿಜಘಟ್ಟಿಗೊಳಿಸಿ ನೀ ಮುಟ್ಟಿ ಮುದ್ರಿಸೊ ದೃಷ್ಟಾಂತವ ನಿಟಿಲನಯನ ಭ್ರೂಮಧ್ಯದೆರೆಸಿ ನೀ ಸಟೆಯ ಮಾಡೊ ಅವಿದ್ಯವ ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯದ ||೨|| ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ ಕಣ್ದೆರೆಸಿ ಅಣುರೇಣುದಲಿ ಪೂರ್ಣಖೂನದೋರೋ ಸಾಕ್ಷಾತವ ಎನ್ನೊಳಗೆ ನಿಜಾನಂದ ಸುಖದೋರಿ ಪುಣ್ಯಗೈಸೊ ನೀ ಜೀವವ ಚಿಣ್ಣ ಕಿಂಕರ ದಾಸ ಮಹಿಪತಿ ರಕ್ಷಿಸೊ ಸಂತತವ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು