ಕಾಡುತಲಿಹುದು ಬೆಡಗಿನ ಕೋಡಗ
(ಮಾಂಡ್ ರಾಗ ಕೇರವಾ ತಾಳ)
ಕಾಡುತಲಿಹುದು ಬೆಡಗಿನ ಕೋಡಗ
ಬಡವರಿಗಳವಲ್ಲ ಪೊಡವಿಯಲಿ ||ಧ್ರುವ||
ಮಾಯದ ಮುಖವದು ಮೋಹದ ನಾಶಿಕ
ಮಾಯ ಮಕರ ಕಿವಿಗಣ್ಣುಗಳು
ಹ್ಯಾವ ಹೆಮ್ಮೆಯು ಹುಬ್ಬು ಕಪಿ ಕಣ್ಣ ಎವೆಗಳು
ಬಾಯಿ ನಾಲಗೆ ಹಲ್ಲು ಬಯಕೆಗಳು ||೧||
ಗರ್ವಗುಣ ಶಿರ ಗಾತ್ರ ಸರ್ವಾಂಗವು ದುರುಳ
ದುರ್ಬುದ್ಧಿಯ ಬೆರಳುಗಳು
ಎರಡು ತುಟಿಗಳೆಂಬ ನಿಂದೆ ದೂಷಣಗಳು
ಕೊರಳು ಕುತ್ತಿಗೆ ದುಷ್ಕರ್ಮಗಳು ||೨||
ಹಣೆಯು ದಾಡಿಯು ಗಲ್ಲ ಪ್ರಪಂಚ ಶೋಭಿತ
ಕಣ್ಣ ಭಾವಗಳಿವು ಚಂಚಲವು
ಬಣ್ಣಬಣ್ಣದಿ ಕುಣಿದಾಡುವ ಕಪಿ
ಗುಣ ಏನೆಂದ್ಹೇಳಲಿ ಕಪಿ ವಿವರಣವ ||೩||
ಉದರ ಬೆನ್ನುಗಳಿವು ಸ್ವಾರ್ಥ ಬುದ್ಧಿಗಳು
ಮದಮತ್ಸರಗಳೆಂಬ ಕೈಗಳು
ಪಾದ ಕಾಲುಗಳಿವು ಕಾಮಕ್ರೋಧಗಳು
ಮೇದಿನಿಯೊಳು ಕುಣಿದಾಡುವದು ||೪||
ಆಶೆಯೇ ಪಂಜವು ವಾಸನೆ ಬಾಲವು
ಮೋಸ ಮೂಕರ ಗುಣಕೇಶಗಳು
ಏಸು ಮಂದಿಯ ಕಪಿ ಘಾಸಿಯ ಮಾಡಿತು
ಮೋಸಗೈಸಿತು ಭವಪಾಶದಲಿ ||೫||
ಅಶನವ್ಯಸನ ತೃಷಿ ಕಪಿಗಿದು
ಭೂಷಣ ಮೀಸಲಾಗಿಡಿಸಿತು ಸುವಾಸದ
ಹಸಗೆಡಿಸುದು ಯತಿಮುನಿಗಳ ತಪಸವ
ಮುಸುಕಿತು ಮೋಸವು ಕಪಿಯಿಂದಲಿ ||೬||
ಕಂಡದ್ದು ಬೇಡುತ ಅಂಡಲಿಯುತಲಿಹುದು
ಮಂಡಲದೊಳು ತಾ ಕಾಡುತಲಿ
ಪಿಂಡ ಬ್ರಹ್ಮಾಂಡದಿ ಲಂಘಿಸುತಿಹುದು
ಹಿಡದು ಬಿಡದು ಮುಷ್ಟಿ ಬಿರುದುಗಳ ||೭||
ಪುಂಡತನದಿ ಬಲು ಮಂಡವಾಗಿಹುದು
ಹಂಡೀಗತನದಲಿ ಬಾಳುವದು
ಭಂಡಿನಾ ಆಟಿಗೆ ಗಂಡಾಗಿಹುದು
ಕಂಡ ಕಡಿಗೆ ಹರಿದಾಡುತಲಿ ||೮||
ಮೂಢ ಮಹಿಪತಿಯ ಕಾಡುವ ಕಪಿಗಿನ್ನು
ಜಡಸೀದ ಗುರು ಜ್ಞಾನಸಂಕೋಲೆಯ
ಕಾಡುವ ಕಪಿ ಕೈಯ ಬಿಡಿಸಿದ ಗುರು ಎನ್ನ
ಕಡೆಯ ಮಾಡಿದ ಬ್ರಾಹ್ಮಣ ಜನ್ಮದಲಿ ||೯||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments