ಕಳ್ಳ ಸಿಕ್ಕಿದ ಕಾಣಿರೇ
(ರಾಗ ಕಲ್ಯಾಣಿ ಅಟತಾಳ)
ಕಳ್ಳ ಸಿಕ್ಕಿದ ಕಾಣಿರೇ , ಎಂದಿನ ಕಡು
ಕಳ್ಳ ಸಿಕ್ಕಿದ ಕಾಣಿರೇ ||
ಕಳ್ಳ ಸಿಕ್ಕಿದ ಕಾಣೆ ಇನ್ನಿವನ ಬಿಡೆಸಲ್ಲ
ಎಲ್ಲಿ ನೋಡಲು ಬ್ರಹ್ಮಾದ್ಯರಿಗೆ ಸಿಗದಂಥ ||ಅ||
ಕಡೆದ ಬೆಣ್ಣೆಯ ತೆಗೆದಿಟ್ಟ ಬಳಿಕ ತನ್ನ
ಉಡಿಯೊಳರಿಯದಂತೆ ಬೆಕ್ಕು ತಂದು
ಕಡೆಗೋಲ ತೆಗೆದು ಬಚ್ಚಿಡೆ ನಾ ಪೋದರೆ
ಪಿಡಿದು ತೋರುತ ಬೆಣ್ಣೆಯನಿತ್ತು ಮೆದ್ದಂಥ ||
ಒಂದು ರಾತ್ರಿಯಲಿ ಮಲಗುತೆಚ್ಚರದಲಿ
ಕಂದಗೆ ಮೊಲೆಯೂಡಲು ಬಂದು
ಒಂದು ಕೈಯಲಿ ಕೂಸಿನ ಕೈಯ ಪಿಡಿದು ಮ-
ತ್ತೊಂದು ಕೈಯಲಿ ಎನ್ನ ಕುಚಗಳ ಪಿಡಿದಂಥ ||
ಹೆರರ ಮನೆಯೊಳುಂಡು ಹೆರರ ಮನೆಯೊಳಿದ್ದು
ಹೆರರ ಭೋಗಿಸುತಿದ್ದ ಗೂಳಿಯಂತೆ
ಇರುಳು ಹಗಲು ಎನ್ನದೆ ಮನೆಮನೆಗಳ
ತಿರುಗುತಲಿಹ ಪುರಂದರವಿಟ್ಠಲನೆಂಬ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments