ಕಳವು ಕಲಿಸಿದೆಮ್ಮ ಗೋಪಿ ಕಮಲನಾಭಗೆ
( ರಾಗ ಧನಶ್ರೀ , ಅಟತಾಳ)
ಕಳವು ಕಲಿಸಿದೆಮ್ಮ ಗೋಪಿ ಕಮಲನಾಭಗೆ ||ಪ||
ಉಳಿಸಿಕೊಂಡ್ಯ ನಿಮ್ಮ ಮನೆಯ ಪಾಲುಬೆಣ್ಣೆಯ ||ಅ||
ಆರು ಏಳಾದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ
ಗೀರುಗಂಧವ ಹಚ್ಚಿ ಹಾರವ ಹಾಕಿ
ಕೇರಿ ಕೇರಿ ಪಾಲು ಬೆಣ್ಣೆ ಸೂರೆ ಮಾಡೀ ಬಾರೆನ್ನುತ
ವಾರಿಜನಾಭನ ಕಳುಹಿದ್ಯಮ್ಮ ವನಜನಯ್ಯನ ||
ಚಿತ್ತಜನಯ್ಯನ ಕೈಲಿ ಚಿನ್ನದ ಚೆಂಡನೆ ಕೊಟ್ಟು
ಅರ್ತಿಯಿಂದ ಶೃಂಗರಿಸಿ ಆಡಿ ಬಾರೆಂದು
ಕತ್ತಲೆ ಬೀದಿಯ ಸುತ್ತೆ ಕಸ್ತೂರಿತಿಲಕವನಿಟ್ಟು
ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ ||
ಸಣ್ಣ ಮಲ್ಲಿಗೆಯ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ
ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ
ಹುಣ್ಣಿಮೆ ಮೀಸಲಪಾಲು ಉಣ್ಣು ಮೆಲ್ಲು ಮೆಲ್ಲೆನುತ್ತ
ಚಿಣ್ಣನ ಕಳುಹಿದ್ಯಮ್ಮ ಉಣ್ಣನಿಕ್ಕದೆ ||
ವಾರಿಜನಾಥ ಮಾಡಿದಂಥ ದೂರು ಹೇಳಿದರೆ ನಿಮಗೆ
ಬಾಯಿಬಡಕರೆಂದು ಗೋಪಿ ಬೈವೆ ನಮ್ಮನು
ಊರು ಮಾಡಿದ ಕೊಳಗ ತಾಯಿ ಮಾಡಿದ ಹೊಟ್ಟೆ
ವಾರಿಜನಾಭನ ಕರೆದು ಗೋಪಿ ಬುದ್ಧಿಯ ಹೇಳೆ ||
ಹೊಟ್ಟೆಬಾಕನಾದನಿವನು ಬೆಟ್ಟದೊಡೆಯಗೆ ಪ್ರಿಯ
ಇಟ್ಟುಕೊಂಡು ಈರೇಳು ಭುವನ ಉದರದಲ್ಲಿಯೆ
ಎಷ್ಟು ಹೇಳಿದರು ಕೇಳ ಏನು ಮಾಡಲಮ್ಮ ನಾನು
ಕಟ್ಟು ಮಾಡಿಸಲು ಬೇಕು ಪುರಂದರವಿಠಲಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments